Breaking News

ಮಾದಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹಕ್ಕೆ ಕೂಡಿ ಬರದ ಮುಹೂರ್ತ: ಬೇಸತ್ತು ಹಸೆಮಣೆ ಏರಿದ 7 ಜೋಡಿ

Spread the love

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸಾಮೂಹಿಕ ವಿವಾಹಕ್ಕೆ ಇನ್ನೂ ಮುಹೂರ್ತ ಕೂಡಿ ಬಾರದ ಕಾರಣ ಬೇಸತ್ತ 7 ಜೋಡಿಗಳು ಸ್ವಂತ ಹಣದಲ್ಲಿ ವಿವಾಹ ಮಾಡಿಕೊಂಡಿದ್ದಾರೆ.

 ಸಾಲೂರು ಮಠದಲ್ಲಿ ಹಸೆಮಣೆ ಏರಿದ ಜೋಡಿಗಳು

ಹೌದು. ಮಲೆಮಹದೇಶ್ವರ ಬೆಟ್ಟದಲ್ಲಿ ನಿಗದಿಯಾಗಿದ್ದ ಸಾಮೂಹಿಕ ವಿವಾಹ ಎರಡು ಬಾರಿ ಮುಂದೂಡಿಕೆಯಾಗಿದೆ. ಹೀಗಾಗಿ ಕ್ಷೇತ್ರದಲ್ಲಿರುವ ಸಾಲೂರು ಮಠದಲ್ಲಿ 7 ಜೋಡಿಗಳು ಹಸೆಮಣೆ ಏರಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ. 23 ರಂದು ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿಯಾಗಿತ್ತು. ಆದರೆ, ಈ ದಿನಾಂಕ‌ ಮುಂದೂಡಿಕೆಯಾಗಿ ಬಳಿಕ ಆ. 28ರಂದು ನಿಗದಿಯಾಗಿತ್ತು. ಆದರೆ ಈಗ ಆ.28ರಂದು ನಿಗದಿಯಾಗಿದ್ದ ಸಾಮೂಹಿಕ ವಿವಾಹ ದಿನಾಂಕ ಮತ್ತೆ ಮುಂದೂಡಿಕೆಯಾಗಿದೆ. ಇದು ಭಕ್ತರು ಬೇಸರಕ್ಕೆ ಕಾರಣವಾಗಿದೆ.

ಮಲೆಮಾದಪ್ಪನ ಸನ್ನಿಧಿಯಲ್ಲಿ ವಿವಾಹವಾದರೆ ಶುಭ ಎಂಬ ನಂಬಿಕೆಯಿದೆ. ಈ ಹಿನ್ನೆಲೆ ಈಗಾಗಲೇ 67 ಜೋಡಿಗಳ ನೋಂದಣಿ ಮಾಡಿಕೊಂಡಿದ್ದರು. ಆದರೆ, ಈಗ ಎರಡು ಬಾರಿ ವಿವಾಹ ದಿನಾಂಕ ಮುಂದೂಡಿಕೆ ಆಗಿದೆ. ಇದರಿಂದ ಬೇಸರಗೊಂಡು ಸಾಲೂರು ಮಠದಲ್ಲಿ ಸ್ವಂತ ದುಡ್ಡಿನಲ್ಲಿ ಸೋಮವಾರ 7 ಜೋಡಿಗಳು ಸಪ್ತಪದಿ ತುಳಿದಿದ್ದಾರೆ.

ಹಸೆಮಣೆ ಏರಿದ 7 ಜೋಡಿ: ವಿವಾಹ ನಿಶ್ಚಯವಾಗಿದ್ದ ಬಹುತೇಕ ಬಡ ವರ್ಗದ ವಧು-ವರರು ಮಲೆಮಹದೇಶ್ವರ ಬೆಟ್ಟದಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಅರ್ಜಿ ಸಲ್ಲಿಸಿದ್ದರು. ಆದರೆ, 2 ಬಾರಿ ವಿವಾಹ ಮುಂದೂಡಿಕೆಯಾಗಿದೆ. ಈ ಹಿನ್ನೆಲೆ ಚಾಮರಾಜನಗರದ ಜಗದೀಶ್-ನಂಜನಗೂಡಿನ ಕಾವ್ಯಶ್ರೀ, ಪಿ.ಜಿ ಪಾಳ್ಯದ ಮಹೇಶ್‌ಕುಮಾರ್- ಮೈಸೂರಿನ ಹೊರಳವಾಡಿಯ ರಮ್ಯ, ತಾಳವಾಡಿಯ ಉದಯ ಕುಮಾರ್ -ಇದೇ ಗ್ರಾಮದ ಸ್ನೇಹ, ನರಸೀಪುರದ ದಿನೇಶ್ – ಮೈಸೂರಿನ ನಿರ್ಮಲ, ನಂಜನಗೂಡು ಹಳೇಪುರದ ಮಹೇಂದ್ರ – ಚಾಮರಾಜನಗರದ ಅರಳೀಪುರ ಗ್ರಾಮದ ಮಂಗಳಮ್ಮ, ಮೈಸೂರಿನ ಸಂಜಯ್- ಸೌಭಾಗ್ಯ ಹಾಗೂ ಚಾಮರಾಜನಗರದ ರವಿ – ಸೌಮ್ಯ ಜೋಡಿ ಸಾಲೂರು ಬೃಹನ್ಮಠದಲ್ಲಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪ್ರಾಧಿಕಾರದ ಕಾರ್ಯದರ್ಶಿ ಪ್ರತಿಕ್ರಿಯೆ: ಇನ್ನು ಮುಂದೆ ವಿವಾಹ ದಿನಾಂಕ ಪೋಸ್ಟ್ ಪೋನ್ ಮಾಡಲ್ಲ. ಕೆಲವರ ದಾಖಲಾತಿ ಸರಿಪಡಿಸುವಿಕೆ ಹಾಗೂ ಉಸ್ತುವಾರಿ ಸಚಿವರ ಸಮಯಕ್ಕಾಗಿ ಕಾಯುತ್ತಿದ್ದೇವೆ. ಸೆ. 3 ಅಥವಾ 6ರಂದು ಸಚಿವರು ಬರುವುದಾಗಿ ಹೇಳಿದ್ದಾರೆ. ಈ ಬಾರಿ ಸಾಮೂಹಿಕ ವಿವಾಹ ಖಂಡಿತ ನೆರವೇರುತ್ತದೆ ಎಂದು ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಮಾಹಿತಿ ನೀಡಿದ್ದಾರೆ. ಇತ್ತ ಸಚಿವರ ಸಮಯಕ್ಕಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪ್ರಾಧಿಕಾರ ಮುಂದೂಡಿಕೆ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ