ಮೈಸೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಮತದಾನದ ಹಿಂದಿನ ದಿನ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ಹರಕೆ ಹೊತ್ತಿದ್ದರು. ಆ ಹರಕೆಯನ್ನು ಇಂದು ಇಬ್ಬರು ಚಾಮುಂಡೇಶ್ವರಿ ತಾಯಿಯ ದೇವಾಲಯದ ಮುಂಭಾಗದಲ್ಲಿ ಈಡುಗಾಯಿ ಒಡೆಯುವ ಮೂಲಕ ತೀರಿಸಿದರು.
ಇಂದು ಚಾಮುಂಡಿ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಆಗಮಿಸಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ಮುಂಭಾಗದಲ್ಲಿ ಇಬ್ಬರು ಜೊತೆಯಾಗಿ, ಚಾಮುಂಡೇಶ್ವರಿಗೆ ನಮಿಸಿ, ಈಡುಗಾಯಿ ಒಡೆದರು.
ಹರಕೆ ಹೊತ್ತಿದ್ದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ : ಮತದಾನದ ಮುನ್ನಾ ದಿನ ಮೇ-೦9 ರಂದು ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಶಕ್ತಿ ನೀಡು ಎಂದು ಚಾಮುಂಡಿ ತಾಯಿಯಲ್ಲಿ ಬೇಡಿಕೊಂಡು ಪೂಜೆ ಸಲ್ಲಿಸಿದ್ದರು. ಅದರಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಾದರು.
ಆಗಸ್ಟ್ 30 ರಂದು ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಇಬ್ಬರು ಚಾಮುಂಡಿ ಬೆಟ್ಟಕ್ಕೆ ಬಂದು ನಾಡ ಅಧಿದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ದೇವಾಲಯದ ಮುಂಭಾಗದಲ್ಲಿ ಈಡುಗಾಯಿ ಒಡೆಯುವ ಮೂಲಕ ತಾವು ಕಟ್ಟಿದ್ದ ಹರಕೆಯನ್ನು ತೀರಿಸಿದರು. ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಒಡೆದ ಕಾಯಿಯನ್ನು ಸ್ವಲ್ಪ ತಿನ್ನುವ ಮೂಲಕ ಫಲ ನಮ್ಮದಾಗುತ್ತದೆ ಎಂಬ ನಂಬಿಕೆಯಿಂದ ಚಾಮುಂಡೇಶ್ವರಿಗೆ ನಮಸ್ಕರಿಸಿ ಹೊರಟರು.