ಬೆಳಗಾವಿ: ಮೊದಲು ಎತ್ತುಗಳು ರೈತನ ಜೀವನಾಡಿ ಆಗಿದ್ದವು.
ಆದರೆ, ಕಾಲ ಬದಲಾದಂತೆ ಈಗ ಬೈಕ್ ರೈತನ ಜೀವನಾಡಿಯಾಗಿದೆ. ಹೌದು ಎತ್ತುಗಳ ಕೊರತೆಯಿಂದಾಗಿ ಬೈಕ್ ಮೂಲಕ ತಮ್ಮ ಹೊಲದಲ್ಲಿ ಎಡೆಕುಂಟೆ ಹೊಡೆಯುವ ಮೂಲಕ ಇಲ್ಲೊಬ್ಬ ರೈತ ಮಾದರಿಯಾಗಿದ್ದಾರೆ.
ಹೌದು ಸವದತ್ತಿ ತಾಲೂಕಿನ ಚಚಡಿ ಗ್ರಾಮದ ರೈತ ಮಹಾಂತೇಶ ಮಹಾದೇವಪ್ಪ ಮತ್ತಿಕೊಪ್ಪ ಎಂಬುವವರೇ ಈ ರೀತಿಯ ವಿನೂತನ ಪ್ರಯತ್ನಕ್ಕೆ ಮುಂದಾದವರು. ತಮ್ಮ ಮೂರು ಎಕರೆ ಹೊಲದಲ್ಲಿ ಗೋವಿನಜೋಳ ಬೆಳೆದಿರುವ ರೈತ ಮಹಾಂತೇಶ, ಬೈಕಿನ ಹಿಂದೆ ಎರಡು ಕುಂಟೆ ಕಟ್ಟಿ, ಇಬ್ಬರು ಕಾರ್ಮಿಕರ ಸಹಾಯದೊಂದಿಗೆ ಬೈಕನ್ನೇರಿ ಎಡೆಕುಂಟೆ ಹೊಡೆಯುತ್ತಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಇತ್ತಿಚೆಗೆ ಮೇವಿನ ಕೊರತೆ ಮತ್ತು ಎತ್ತುಗಳನ್ನು ಸಾಕಲು ಹೆಚ್ಚು ಖರ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಎಲ್ಲರೂ ಯಂತ್ರೋಪಕರಣಗಳ ಮೊರೆ ಹೋಗುತ್ತಿದ್ದಾರೆ. ಹಾಗಾಗಿ ಎತ್ತುಗಳೇ ಇಲ್ಲದೇ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಜಮೀನನ್ನು ನೇಗಿಲ ಹೊಡೆಯಲು ಟ್ರ್ಯಾಕ್ಟರ್ ಬಳಸುತ್ತಿದ್ದರು. ಆದರೆ, ಎಡೆಕುಂಟೆ ಹೊಡೆಯಲು ಎತ್ತುಗಳನ್ನೆ ಬಳಸುತ್ತಿದ್ದರು. ಈಗ ಎತ್ತುಗಳ ಬಾಡಿಗೆಯೂ ಹೆಚ್ಚಾಗಿದ್ದರಿಂದ ರೈತ ಮಹಾಂತೇಶ ಬೈಕ್ ಏರಿ ಎಡೆಕುಂಟೆ ಹೊಡೆದು, ಖರ್ಚಿಗೆ ಕಡಿವಾಣ ಹಾಕಿದ್ದಾರೆ. ಅಲ್ಲದೇ ಇವರನ್ನು ನೋಡಿದವರೆಲ್ಲಾ ನಾವು ಹೀಗೆ ಮಾಡಬಹುದಲ್ಲ ಎನ್ನುವಷ್ಟರ ಮಟ್ಟಿಗೆ ಮಾದರಿಯಾಗಿದ್ದಾರೆ.