Breaking News

ವಿಷಾಹಾರ ಸೇವನೆ.. ಸಮತಾ ಆಶ್ರಮ ಶಾಲೆಯ 170 ವಿದ್ಯಾರ್ಥಿಗಳು ಅಸ್ವಸ್ಥ

Spread the love

ಸಾಂಗ್ಲಿ(ಮಹಾರಾಷ್ಟ್ರ): ಸಮತಾ ಆಶ್ರಮ ಶಾಲೆಯ ಮಕ್ಕಳು ಭಾನುವಾರ ರಾತ್ರಿ ಊಟ ಮಾಡಿದ ಬಳಿಕ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಾಂಗ್ಲಿ – ಜತ್ತ ತಾಲೂಕಿನ ಉಮಡಿಯಲ್ಲಿ ನಡೆದಿದೆ.

ಒಟ್ಟು 170 ವಿದ್ಯಾರ್ಥಿಗಳು ಆಹಾರ ಸೇವಿಸಿದ್ದು, ಫುಡ್​ ಪಾಯಿಸನ್​ ಆಗಿದೆ. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ತಕ್ಷಣವೇ ಮದ್ಗ್ಯಾಲ್‌ನಲ್ಲಿರುವ ಗ್ರಾಮೀಣ ಪ್ರಥಮ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ.

ಪ್ರಥಮ ಚಿಕಿತ್ಸೆ ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಕೆಲ ವಿದ್ಯಾರ್ಥಿಗಳನ್ನು ಸಾಂಗ್ಲಿ ಹಾಗೂ ಮಿರಾಜ್​​ನಲ್ಲಿರುವ ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸದ್ಯ ಎಲ್ಲ ಮಕ್ಕಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಲ್ಲಿನ ಆಸ್ಪತ್ರೆ ಮೂಲಗಳು ತಿಳಿಸಿವೆ.

ಉಮ್ಮಡಿಯ ಸಮತಾ ಆಶ್ರಮ ಶಾಲೆಯಲ್ಲಿ ಒಟ್ಟು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ 5 ವರ್ಷದಿಂದ 15 ವರ್ಷ ವಯಸ್ಸಿನ ಹುಡುಗರು ಮತ್ತು ಹುಡುಗಿಯರೂ ಸೇರಿದ್ದಾರೆ. ಎಂದಿನಂತೆ ರಾತ್ರಿ ಆಶ್ರಮ ಶಾಲೆಯಿಂದ ಮಕ್ಕಳಿಗೆ ಊಟ ಕೊಡಲಾಗಿತ್ತು. ಆದರೆ, ಭಾನುವಾರ ರಾತ್ರಿ ಊಟ ಮಾಡಿದ ಬಳಿಕ ಮಕ್ಕಳಿಗೆ ಏಕಾಏಕಿ ವಾಂತಿ, ಭೇದಿ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ಘಟನೆ ಕುರಿತಂತೆ ಇದೀಗ ಪ್ರಾಥಮಿಕ ತನಿಖೆ ನಡೆಸಲಾಗುತ್ತಿದೆ. ಏಕಕಾಲಕ್ಕೆ 170 ಮಕ್ಕಳು ಅಸ್ವಸ್ಥರಾಗಿರುವುದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ. ಆಹಾರದಲ್ಲಿ ವ್ಯತ್ಯಯವಾಗಲು ನಿಖರವಾದ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಿ 24 ಗಂಟೆಯೊಳಗೆ ವರದಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅಲ್ಲಿನ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ಆಶ್ರಮ ಶಾಲೆಗಳಿಂದ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ಕುರಿತಂತೆ ಈಗ ತನಿಖೆ ನಡೆಸಲಾಗುತ್ತಿದೆ.

ಹಾವೇರಿಯಲ್ಲಿ ಗೃಹ ಪ್ರವೇಶ ಊಟ ಸೇವಿಸಿ ಜನ ಅಸ್ವಸ್ಥ: ಹಾವೇರಿಯಲ್ಲಿ ಇದೇ 25 ರಂದು ಇಂತಹುದೇ ಘಟನೆ ವರದಿಯಾಗಿತ್ತು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದಲ್ಲಿ ಶೇಖರಪ್ಪ ಎಂಬುವವರ ಗೃಹ ಪ್ರವೇಶ ಊಟದ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಎಲ್ಲರು ಭೋಜನ ಸ್ವೀಕರಿಸಿದ್ದರು. ಬಳಿಕ ಆಹಾರ ಸೇವಿಸಿದ್ದ ವಿದ್ಯಾರ್ಥಿಗಳು ಸೇರಿದಂತೆ 30ಕ್ಕೂ ಅಧಿಕ ಜನ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಸ್ವಸ್ಥಗೊಂಡವರನ್ನು ರಾಣೆಬೆನ್ನೂರು ತಾಲೂಕಿನ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಅಸ್ವಸ್ಥರ ಆರೋಗ್ಯ ಸ್ಥಿರವಾಗಿದೆ. ಈ ಕುರಿತಂತೆ ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ