ಬೆಂಗಳೂರು: ಕರ್ನಾಟಕ ತೊರೆದು ವಿದರ್ಭ ಕ್ರಿಕೆಟ್ ಸೇರಿರುವ ಬ್ಯಾಟರ್ ಕರುಣ್ ನಾಯರ್ ಅಬ್ಬರದ ಶತಕ ಹಾಗೂ ರವಿಕುಮಾರ್ ಸಮರ್ಥ್ ಅವರ ಅರ್ಧಶತಕವು ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಕ್ಕೆ ಸೋಲು ತಂದು ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ತಂಡ ಫೈನಲ್ ಟಿಕೆಟ್ ಪಡೆಯುವಂತೆ ಮಾಡಿತು.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ತೀವ್ರ ಹಣಾಹಣಿ ಮಧ್ಯೆ ಗುಲ್ಬರ್ಗಾ 36 ರನ್‌ಗಳಿಂದ ಪರಾಜಯ ಕಂಡಿತು. ಇಂದು (ಮಂಗಳವಾರ) ಹುಬ್ಬಳ್ಳಿ ಟೈಗರ್ಸ್ ಮತ್ತು ಮೈಸೂರು ವಾರಿಯರ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ನಾಯರ್ ಬ್ಯಾಟಿಂಗ್ ವೈಭವ : ಟಾಸ್ ಸೋತರೂ ಬ್ಯಾಟಿಂಗ್ ಗಿಟ್ಟಿಸಿಕೊಂಡ ಮೈಸೂರು ತಂಡಕ್ಕೆ ನಾಯಕ ಕರುಣ್ ನಾಯರ್, ಆರ್. ಸಮರ್ಥ್ ಮತ್ತು ಕಾರ್ತಿಕ್ ರನ್ ಮಳೆಯನ್ನೇ ಸುರಿಸಿದರು. ಅದರಲ್ಲೂ ಕರುಣ್ ನಾಯರ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಮೂಲೆಮೂಲೆಗೆ ಚೆಂಡನ್ನು ಅಟ್ಟಿದರು. 42 ಎಸೆತಗಳಲ್ಲಿ ಅಜೇಯ 107 ರನ್ ಗಳಿಸಿದ ಕರುಣ್, ಏಳು ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಸಿಡಿಸಿ ಅಜೇಯರಾಗಿ ಉಳಿದರು. ಇತ್ತ ರವಿಕುಮಾರ್ ಸಮರ್ಥ್ 50 ಎಸೆತಗಳಲ್ಲಿ 80 ರನ್ ಗಳಿಸಿ ಕರುಣ್ಗೆ ಉತ್ತಮ ಬೆಂಬಲ ನೀಡಿದರು. ಆರಂಭಿಕ ಬ್ಯಾಟರ್ ಎಸ್ಯು ಕಾರ್ತಿಕ್ 41 ರನ್ ಮಾಡಿದರು.
ಆರಂಭಿಕರಾದ ರವಿಕುಮಾರ್ ಸಮರ್ಥ್ ಮತ್ತು ಎಸ್.ಯು ಕಾರ್ತಿಕ್ ಜೋಡಿ ಮೊದಲ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಪೇರಿಸುವ ಮೂಲಕ ಪವರ್ ಪ್ಲೇನ ಸಂಪೂರ್ಣ ಸದುಪಯೋಗ ಪಡೆಯಿತು. 9ನೇ ಓವರ್‌ನಲ್ಲಿ ಡಿ.ಅವಿನಾಶ್ ಬೌಲಿಂಗ್‌ನಲ್ಲಿ ಎಸ್.ಯು ಕಾರ್ತಿಕ್ (41) ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್‌ಗೆ ಸಮರ್ಥ್ ಜೊತೆಗೂಡಿದ ನಾಯಕ ಕರುಣ್ ನಾಯರ್ ಅಕ್ಷರಶಃ ಆರ್ಭಟಿಸಿದರು.
ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಾರಿಸಿದ ಕರುಣ್ ಅಜೇಯ ಶತಕ ಬಾರಿಸಿದರು. ನಂತರ ಬಂದ ಮನೋಜ್ ಭಾಂಡಗೆ ಅಜೇಯ 18 ರನ್ ಗಳಿಸಿದರು. ನಿಗದಿತ 20 ಓವರ್‌ಗಳ ಅಂತ್ಯಕ್ಕೆ ಮೈಸೂರು ತಂಡ 2 ವಿಕೆಟ್‌ಗೆ 248 ರನ್ ಗಳಿಸಿತು.
Laxmi News 24×7