ನವದೆಹಲಿ: 69ನೇ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಇಂದು (ಗುರುವಾರ) ಪ್ರಕಟಿಸಿದೆ.
ಕನ್ನಡ ಚಿತ್ರರಂಗದ ರಕ್ಷಿತ್ ಶೆಟ್ಟಿ ಅವರ ‘ಚಾರ್ಲಿ 777’ ಸಿನಿಮಾ ಉತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ‘ಆರ್ಆರ್ಆರ್’ ಸಿನಿಮಾಗೆ ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ, ನೃತ್ಯ ನಿರ್ದೇಶನ ಪ್ರಶಸ್ತಿಗಳ ಗೌರವ ಸಿಕ್ಕಿದೆ.
‘ಉಪ್ಪೇನಾ’ ಸಿನಿಮಾವನ್ನು ಅತ್ಯುತ್ತಮ ತೆಲುಗು ಚಲನಚಿತ್ರವಾಗಿ ಘೋಷಿಸಲಾಗಿದೆ. ‘ಹೋಮ್’ ಅತ್ಯುತ್ತಮ ಮಲಯಾಳಂ ಚಿತ್ರ. ‘ಸರ್ದಾರ್ ಉಧಮ್’ ಅತ್ಯುತ್ತಮ ಹಿಂದಿ ಚಿತ್ರವಾಗಿ ಆಯ್ಕೆಯಾಗಿದೆ. ‘ಚೆಲ್ಲೋ ಶೋ’ ಅತ್ಯುತ್ತಮ ಗುಜರಾತಿ ಚಿತ್ರ ಪ್ರಶಸ್ತಿ ಪಡೆಯಲಿದೆ ಎಂದು ನಿರ್ದೇಶಕ ಕೇತನ್ ಮೆಹ್ತಾ ಘೋಷಿಸಿದರು.
‘ಗಂಗೂಬಾಯಿ ಕಥಿಯಾವಾಡಿ’ ಮತ್ತು ‘ಮಿಮಿ’ ಚಿತ್ರಕ್ಕಾಗಿ ಬಾಲಿವುಡ್ನ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ‘ಪುಷ್ಪ: ದಿ ರೈಸ್’ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ಅತ್ಯುತ್ತಮ ಸಿನಿಮಾ ಪ್ರಶಸ್ತಿಗಳು:
- ಸರ್ದಾರ್ ಉಧಮ್ – ಅತ್ಯುತ್ತಮ ಹಿಂದಿ ಚಿತ್ರ
- ಚೆಲ್ಲೋ ಶೋ – ಅತ್ಯುತ್ತಮ ಗುಜರಾತಿ ಚಿತ್ರ
- 777 ಚಾರ್ಲಿ – ಅತ್ಯುತ್ತಮ ಕನ್ನಡ ಚಿತ್ರ
- ಆರ್ಆರ್ಆರ್ – ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ
- ಆರ್ಆರ್ಆರ್ – ಅತ್ಯುತ್ತಮ ನೃತ್ಯ ನಿರ್ದೇಶನ
- ರಾಕೆಟ್ರಿ: ದಿ ನಂಬಿ ಎಫೆಕ್ಟ್ – ಅತ್ಯುತ್ತಮ ಚಲನಚಿತ್ರ
- ಶೆರ್ಷಾ – ಸ್ಪೆಶಲ್ ಜ್ಯೂರಿ ಅವಾರ್ಡ್
- ದಿ ಕಾಶ್ಮೀರ್ ಫೈಲ್ಸ್ – ನರ್ಗೀಸ್ ದತ್ ಪ್ರಶಸ್ತಿ
ಅತ್ಯುತ್ತಮ ನಟ, ನಟಿ ಪ್ರಶಸ್ತಿಗಳು:
- ಕೃತಿ ಸನೋನ್ – ಮಿಮಿ ಸಿನಿಮಾ
- ಆಲಿಯಾ ಭಟ್ – ಗಂಗೂಬಾಯಿ ಕಥಿಯಾವಾಡಿ
- ಅಲ್ಲು ಅರ್ಜುನ್ – ಪುಷ್ಪ: ದಿ ರೈಸ್
ಅತ್ಯುತ್ತಮ ಸಂಗೀತ ಪ್ರಶಸ್ತಿ:
- ಶ್ರೇಯಾ ಘೋಷಾಲ್ – ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿ (ಇರವಿನ್ ನಿಜಲ್ ಚಿತ್ರದ ಮಾಯವ ಚಾಯವ ಹಾಡು)
- ಕಾಲ ಭೈರವ – ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ ಪ್ರಶಸ್ತಿ (ಆರ್ಆರ್ಆರ್ ಸಿನಿಮಾದ ಕೋಮುರಂ ಭೀಮುಡೋ)
ಬಾಲಿವುಡ್ನ ಲವೆಬಲ್ ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯ ಸೂಪರ್ ಹಿಟ್ ಸಿನಿಮಾ ಸ್ಪೆಶಲ್ ಜ್ಯೂರಿ ಅವಾರ್ಡ್ ಪಡೆದುಕೊಂಡಿದೆ. ‘ದಿ ಕಾಶ್ಮೀರ್ ಫೈಲ್ಸ್’ ರಾಷ್ಟ್ರೀಯ ಏಕೀಕರಣದ ಸಲುವಾಗಿ ಬೆಸ್ಟ್ ಫೀಚರ್ ಫಿಲ್ಮ್ ಎನಿಸಿಕೊಂಡಿದ್ದು, ಅತ್ಯುತ್ತಮ ಚಲನಚಿತ್ರಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿ ಗೆದ್ದಿದೆ. ಮತ್ತೊಂದೆಡೆ, ಬಾಲಿವುಡ್ನ ಇಬ್ಬರು ನಟಿಯರು ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಿಮಿ ಸಿನಿಮಾಗೆ ಕೃತಿ ಸನೋನ್ ಮತ್ತು ಗಂಗೂಬಾಯಿ ಕಥಿಯಾವಾಡಿ ಸಿನಿಮಾಗೆ ಆಲಿಯಾ ಭಟ್ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ.