ಬೆಂಗಳೂರು: 3ಡಿ ಪ್ರಿಂಟಿಂಗ್ ಟೆಕ್ನಾಲಜಿ ಬಳಸಿ ನಿರ್ಮಿಸಲಾಗಿರುವ ಅಂಚೆ ಕಚೇರಿ ಕಟ್ಟಡವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರಿನಲ್ಲಿ ಇಂದು ಉಧ್ಘಾಟನೆ ಮಾಡಿದರು. ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಇದಾಗಿದ್ದು ನೂತನ ತಂತ್ರಜ್ಞಾನಕ್ಕೆ ನಾಂದಿಹಾಡಲಾಯಿತು. ಎಲ್&ಟಿ ಮೂಲಕ ಈ ಅಂಚೆ ಕಚೇರಿಯನ್ನು ನಿರ್ಮಾಣ ಮಾಡಲಾಗಿದ್ದು ಐಐಟಿ ಚೆನ್ನೈ ಪ್ರಸ್ತುತ ಯೋಜನೆಯಲ್ಲಿ ತಾಂತ್ರಿಕ ಮಾರ್ಗದರ್ಶನ ಒದಗಿಸಿದೆ. ಒಟ್ಟು 1021 ಚದರ ಅಡಿಗಳ ವಿಸ್ತೀರ್ಣ ಹೊಂದಿರುವ ಈ ಕಟ್ಟವನ್ನು 3ಡಿ ಕಾಂಕ್ರೀಟ್ ಮುದ್ರಣ ತಂತ್ರಜ್ಞಾನದ ಸಹಾಯದಿಂದ ನಿರ್ಮಾಣ ಮಾಡಿರುವುದು ವಿಶೇಷ.
ಇದು ಸಂಪೂರ್ಣ ಸ್ವಯಂಚಾಲಿತ ಕಟ್ಟಡ ನಿರ್ಮಾಣ ತಂತ್ರಜ್ಞಾನವಾಗಿದ್ದು, ಇದರಲ್ಲಿ ರೊಬೊಟಿಕ್ ಪ್ರಿಂಟರ್ ಅನುಮೋದನೆ ನೀಡಿರುವ ವಿನ್ಯಾಸದ ಪ್ರಕಾರ ವಿಶೇಷ ದರ್ಜೆಯ ಕಾಂಕ್ರೀಟ್ ಅನ್ನು ಲೇಯರ್-ಬೈ-ಲೇಯರ್ ಜೋಡಿಸುತ್ತಾ ಹೋಗುತ್ತದೆ. ಪದರಗಳ ನಡುವಿನ ಬಂಧವನ್ನು ಖಚಿತಪಡಿಸಿಕೊಳ್ಳಲು ತ್ವರಿತವಾಗಿ ಗಟ್ಟಿಯಾಗುವ ಕಾಂಕ್ರೀಟ್ ಅನ್ನು ಬಳಸಲಾಗಿದೆ. ಸಾಂಪ್ರದಾಯಿಕ ವಿಧಾನದಲ್ಲಿ 6ರಿಂದ 8 ತಿಂಗಳು ತೆಗೆದುಕೊಳ್ಳುವ ನಿರ್ಮಾಣ ಚಟುವಟಿಕೆಗಳನ್ನು ಈ ಮೂಲಕ ಕೇವಲ 45 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ವೆಚ್ಚ ಮತ್ತು ಸಮಯದ ಉಳಿತಾಯದಿಂದ ಈ 3ಡಿ-ಕಾಂಕ್ರೀಟ್ ಮುದ್ರಣ ತಂತ್ರಜ್ಞಾನವು ಸಾಂಪ್ರದಾಯಿಕ ಕಟ್ಟಡ ಪದ್ಧತಿಗಳಿಗೆ ಪರ್ಯಾಯವಾಗಿ ರೂಪುಗೊಂಡಿದೆ.
3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ
ವರ್ಚುವಲ್ ಮೂಲಕ ಕಟ್ಟಡ ಉಧ್ಘಾಟನೆ ಮಾಡಿದ ಕೇಂದ್ರ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ಬಲಿಷ್ಠ ನಾಯಕತ್ವದಲ್ಲಿ ಭಾರತ ದೇಶವು ಸ್ಥಳೀಯ ಸೊಗಡಿನೊಂದಿಗೆ ತಂತ್ರಜ್ಞಾನ ನಾವೀನ್ಯತೆಯಲ್ಲಿ ದಾಪುಗಾಲು ಹಾಕುತ್ತಿದೆ. ಅಗತ್ಯವಾದ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿರುವ ಕೇಂದ್ರ ಸರ್ಕಾರವು, ನಮ್ಮ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಹೊಸ ಆವಿಷ್ಕಾರಗಳಿಗೆ ಪ್ರೇರೇಪಿಸಲು ಬದ್ಧ ಎಂದು ನುಡಿದರು.