Breaking News

ಗೋದ್ರಾ ರೈಲಿಗೆ ಬೆಂಕಿ ಹಚ್ಚಿದ ಮೂವರು ಅಪರಾಧಿಗಳಿಗೆ ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್​

Spread the love

ನವದೆಹಲಿ: ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆ ಗಂಭೀರವಾದುದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ಕೋಚ್‌ಗೆ ಕಲ್ಲೆಸೆದು, ಪ್ರಯಾಣಿಕರನ್ನು ದೋಚಿದ್ದ ಮೂವರು ಆರೋಪಿಗಳ ಜಾಮೀನನ್ನು ಸೋಮವಾರ ತಿರಸ್ಕರಿಸಿದೆ.

 

2002 ರ ಫೆಬ್ರವರಿ 27 ರಂದು ಗುಜರಾತ್​ನ ಗೋಧ್ರಾದಲ್ಲಿ ರೈಲಿನ ಕೋಚ್​ಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿತ್ತು. ದುರ್ಘಟನೆಯಲ್ಲಿ 59 ಜನರು ಅಗ್ನಿಗಾಹುತಿಯಾಗಿ, ಹಲವರು ಗಾಯಗೊಂಡಿದ್ದರು. ಬಳಿಕ ಇದು ರಾಜ್ಯದ ಅನೇಕ ಭಾಗಗಳಲ್ಲಿ ದೊಡ್ಡ ಗಲಭೆ, ಹತ್ಯಾಕಾಂಡಕ್ಕೆ ಕಾರಣವಾಗಿತ್ತು. ಅಂತಹ ಪ್ರಕರಣದ ಮೂವರು ಆರೋಪಿಗಳು ಬಿಡುಗಡೆಗೆ ಕೋರಿದ್ದ ಜಾಮೀನು ಅರ್ಜಿ ತಿರಸ್ಕೃತವಾಗಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠದ ಮುಂದೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ, ಇಬ್ಬರು ಆರೋಪಿಗಳು ಕಲ್ಲು ತೂರಾಟ ನಡೆಸಿದ್ದರೆ, ಮೂರನೇ ಆರೋಪಿ ಆಭರಣ ಕದ್ದ ಆರೋಪ ಎದುರಿಸುತ್ತಿದ್ದಾರೆ ಎಂದು ವಾದಿಸಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ವಕೀಲ ಸ್ವಾತಿ ಘಿಲ್ಡಿಯಾಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಗುಜರಾತ್ ಸರ್ಕಾರವನ್ನು ಪ್ರತಿನಿಧಿಸಿ, ಆರೋಪಿಗಳು ಕೇವಲ ಕಲ್ಲು ತೂರಾಟಗಾರರಲ್ಲ, ಪ್ರಯಾಣಿಕರನ್ನು ಗಂಭೀರವಾಗಿ ಗಾಯಗೊಳಿಸಿ ಅವರನ್ನು ದೋಚಿದ್ದಾರೆ ಎಂದು ವಾದಿಸಿದರು.

ಪ್ರಕರಣದಲ್ಲಿ ಪ್ರತಿಯೊಬ್ಬ ಆರೋಪಿಯೂ ಗಂಭೀರವಾದ ಕೃತ್ಯ ಎಸಗಿದ್ದಾರೆ. ಹೀಗಾಗಿ ಅವರಿಗೆ ಇನ್ನೂ ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ರಾಜ್ಯ ಸರ್ಕಾರ ಕೋರ್ಟ್​ ಮುಂದೆ ವಾದ ಮಂಡನೆ ಮಾಡಿದೆ. ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರು ಸರ್ಕಾರದ ಈ ವಾದವನ್ನು ಪುರಸ್ಕರಿಸಿದರು.

ಬಂಧಿತರಲ್ಲಿ ದೋಚಿದ ಯಾವುದೇ ಚಿನ್ನಾಭರಣಗಳು ಪತ್ತೆಯಾಗಿಲ್ಲ. ಅವರು 17 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಅವರಿಗೆ ಜಾಮೀನು ನೀಡಬೇಕು ಎಂದು ಸಂಜಯ್ ಹೆಗ್ಡೆ ಕೋರಿದರು.

ಈ ವೇಳೆ ಮುಖ್ಯ ನ್ಯಾಯಾಧೀಶರು ರೈಲಿಗೆ ಬೆಂಕಿ ಹಚ್ಚಿದ ಘಟನೆಯು ತುಂಬಾ ಗಂಭೀರವಾಗಿದೆ. ಇದು ಬೇರೆ ಪ್ರಕರಣಗಳಂತೆ ಸಾಮಾನ್ಯವಾಗಿಲ್ಲ ಎಂದು ಪೀಠ ಹೇಳಿತು. ಬಳಿಕ ಈ ಅರ್ಜಿಯನ್ನು ಹೆಚ್ಚಿನ ವಿಚಾರಣೆಗಾಗಿ ಪಟ್ಟಿ ಮಾಡಲಾಗುವುದು. ಹೀಗಾಗಿ ಅವರು ಕೋರಿರುವ ಜಾಮೀನನ್ನು ನೀಡುವುದಿಲ್ಲ. ಇದು ಅವರ ಹಕ್ಕನ್ನು ಚ್ಯುತಿ ಮಾಡಿದಂತೆ ಆಗುವುದಿಲ್ಲ ಎಂದು ಕೋರ್ಟ್​ ಹೇಳಿತು.

ಇದೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 8 ಅಪರಾಧಿಗಳಿಗೆ ಸುಪ್ರೀಂಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಅವರು ಸುಮಾರು 17-18 ವರ್ಷಗಳಿಂದ ಜೈಲಿನಲ್ಲಿದ್ದರು. ಇದೇ ವೇಳೆ ಪ್ರಕರಣದ ಇತರ ನಾಲ್ವರಿಗೆ ಜಾಮೀನು ನಿರಾಕರಿಸಿತ್ತು.


Spread the love

About Laxminews 24x7

Check Also

ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಪತ್ನಿ ಹಾಗೂ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ

Spread the loveಕಾರವಾರ: ದಾಂಡೇಲಿ ಸಮೀಪದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ್​ ಸುತಾರ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ