ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡುವಂತೆ ಒತ್ತಾಯಿಸಿ ಮೃತರ ತಾಯಿ ಮತ್ತು ಪತ್ನಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರ ಮುಂದೆ ಕಣ್ಣೀರು ಹಾಕಿದ ಘಟನೆ ನಡೆಯಿತು. ಈ ಮೂಲಕ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಸಂತೋಷ ಪಾಟೀಲ ತಾಯಿ ಪಾರ್ವತಿ ಮತ್ತು ಪತ್ನಿ ಜಯಶ್ರೀ, ಆತ್ಮಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸುವ ನಿಟ್ಟಿನಲ್ಲಿ ಸಿಐಡಿಗೆ ವಹಿಸುವಂತೆ ಮನವಿ ಮಾಡಿಕೊಂಡರು. ”ನಮಗೆ ಇತ್ತ ಮಗನೂ ಇಲ್ಲ, ಅತ್ತ ಬಾಕಿ ಹಣದ ಬಿಲ್ ಕೂಡಾ ಬಂದಿಲ್ಲ. ನೌಕರಿ ಕೊಡಿಸುತ್ತೇವೆ ಎಂದಿದ್ದರು, ಅದೂ ಆಗಿಲ್ಲ. ಸಣ್ಣ ಮಗನನ್ನು ಕಟ್ಟಿಕೊಂಡು ಹೇಗೆ ಜೀವನ ಮಾಡೋದು” ಎಂದು ಕಣ್ಣೀರಾದರು.
ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ: ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ”ಪೊಲೀಸರಿಂದ ನಮಗೆ ನ್ಯಾಯ ಸಿಕ್ಕಿಲ್ಲ, ಹಾಗಾಗಿ ಸಿಐಡಿ ಮೂಲಕ ಮರು ತನಿಖೆ ಮಾಡಿಸುವಂತೆ ಸಂತೋಷ ಕುಟುಂಬಸ್ಥರು ಮನವಿ ಸಲ್ಲಿಸಿದ್ದಾರೆ. ಪೊಲೀಸರು ಮತ್ತು ಕಾನೂನು ಇಲಾಖೆ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದರು.
ತಾಯಿ, ಪತ್ನಿ ಹೇಳಿದ್ದೇನು?: ತಾಯಿ ಪಾರ್ವತಿ ಮಾತನಾಡಿ, ”ನನ್ನ ಮಗನ ಜೀವ ಉಳಿಸಬೇಕಿತ್ತು. ಬಾಕಿ ಬಿಲ್ ಕೂಡಾ ಕೊಟ್ಟಿಲ್ಲ. ನಮಗೆ ಅನ್ಯಾಯವಾಗಿದೆ. ಹೋದ ಜೀವ ಯಾರು ಕೊಡುತ್ತಾರೆ. ಆತ ಹುಲಿಯಂತಿದ್ದ” ಎಂದು ಗೋಳಾಡಿದರು. ಪತ್ನಿ ಜಯಶ್ರೀ, ”ಸಿಐಡಿ ತನಿಖೆ ಮಾಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಇದಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ” ಎಂದರು.
ಪ್ರಕರಣದ ಹಿನ್ನೆಲೆ : ಬೆಳಗಾವಿ ಹಿಂಡಲಗಾ ಗ್ರಾ.ಪಂ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ 4 ಕೋಟಿ ರೂ. ವೆಚ್ಚದ 108 ಕಾಮಗಾರಿಗಳನ್ನು ಕಾರ್ಯ ಮಾಡಿಸಿದ್ದರು. ಬಿಲ್ ಮಂಜೂರು ಮಾಡಲು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಮಿಷನ್ ಕೇಳುತ್ತಿದ್ದಾರೆ ಎಂದು ಪ್ರಧಾನಿ ಸೇರಿ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಇದಾದ ನಂತರ ಈಶ್ವರಪ್ಪನವರು ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ನಂತರ ಸಂತೋಷ್ ಪಾಟೀಲ ಉಡುಪಿಯ ಖಾಸಗಿ ಲಾಡ್ಜ್ಯೊಂದರಲ್ಲಿ ಆತ್ಮಹತ್ಯೆ ಶರಣಾಗಿದ್ದರು. ಇತ್ತೀಚೆಗೆ ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ ಈಶ್ವರಪ್ಪರಿಗೆ ಕ್ಲೀನ್ ಚಿಟ್ ನೀಡಿತ್ತು.
Laxmi News 24×7