Breaking News

ರಾಜ್ಯಾದ್ಯಂತ ಆಗಸ್ಟ್ 27ರಂದು ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ

Spread the love

ಬೆಂಗಳೂರು: ರಾಜ್ಯ ಸರ್ಕಾರದ ‘ಬಹುನಿರೀಕ್ಷಿತ’ ಗೃಹ ಲಕ್ಷ್ಮೀ ಯೋಜನೆಗೆ ಆಗಸ್ಟ್​ 27ರಂದು ಚಾಲನೆ ನೀಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಇಂದು ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಆಗಸ್ಟ್ 27ರಂದು ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಲಾಗುತ್ತದೆ ಎಂದು ಹೇಳಿದರು.

ರಾಜ್ಯದ 11 ಸಾವಿರ ಕಡೆಗಳಲ್ಲಿ ಏಕಕಾಲಕ್ಕೆ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುವುದು. ಎಲ್ಲಾ ಗ್ರಾಮ ಪಂಚಾಯತ್​, ನಗರಸಭೆ, ಪುರಸಭೆಗಳಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಈ ಸಂಬಂಧ ಪಂಚಾಯತಿಗೊಬ್ಬರಂತೆ ನೋಡೆಲ್ ಅಧಿಕಾರಿಗಳನ್ನು ನೇಮಕ‌ ಮಾಡಿದ್ದೇವೆ ಎಂದು ಡಿಸಿಎಂ ಹೇಳಿದರು.

ಪಕ್ಷಾತೀತವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಎಲ್ಲರಿಗೂ ಅನುಕೂಲ ಆಗಲೆಂದು ಭಾನುವಾರ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ. ಸುಮಾರು 1.5 ಕೋಟಿ ಗೃಹಿಣಿಯರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ.‌ ಈ ಯೋಜನೆಗೆ ಯಾವಾಗ ಬೇಕಾದರೂ ನೋಂದಣಿ ಮಾಡಿಕೊಳ್ಳಬಹುದು ಎಂದು ಇದೇ ವೇಳೆ ತಿಳಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಬೆಳಗಾವಿಯಲ್ಲೇ ಗೃಹ ಲಕ್ಷ್ಮೀ ಯೋಜನೆಗೆ ಚಾಲನೆ ಸಿಗಬೇಕೆಂದು ನನ್ನ ಕನಸು. ಈ ಕುರಿತು ಸಿಎಂ, ಡಿಸಿಎಂ ಬಳಿ ಮನವಿ ಸಲ್ಲಿಸಿದೆ. ನನ್ನ ಮನವಿಗೆ ಸ್ಪಂದಿಸಿದ ನಾಯಕರು, ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲು ಸಹಕರಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಈ ಯೋಜನೆಗೆ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು. ಕೆಲವರ ಬಳಿ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಇಲ್ಲ. ಹೊಸದಾಗಿ ಮಾಡಿಸಬೇಕಿದೆ. ಅಂತವರು ಕಾರ್ಡ್ ಮಾಡಿಸಿದ ಬಳಿಕ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಇದಕ್ಕೂ ಮುನ್ನ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಯೋಜನೆ ಬಗ್ಗೆ ಡಿಸಿಎಂ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಪೌರಾಡಳಿತ ಖಾತೆ ಸಚಿವ ರಹೀಂ ಖಾನ್, ಐಎಎಸ್ ಅಧಿಕಾರಿಗಳಾದ ಅರ್ಚನಾ, ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ