ಮೈಸೂರು: ಮಗಳನ್ನು ಮದುವೆ ಮಾಡಿಕೊಡಲು ಒಪ್ಪದ ತಂದೆಯ ನಿರ್ಧಾರದಿಂದ ಕೋಪಗೊಂಡ ಯುವಕನೊಬ್ಬ, ಯುವತಿಯ ತಂದೆಗೆ ಸೇರಿದ ಫಸಲಿಗೆ ಬಂದಿದ್ದ 850ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಮನಬಂದಂತೆ ಕತ್ತರಿಸಿ ಹಾಕಿರುವ ಆರೋಪ ಪ್ರಕರಣ ಹುಣಸೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ಈ ಸಂಬಂಧ ಯುವತಿಯ ತಂದೆ ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹುಣಸೂರು ತಾಲೂಕಿನ ಕಡೆಮನುಗನಹಳ್ಳಿ ಎಂಬ ಗ್ರಾಮದಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ.
ಕಡೆಮನುಗನಹಳ್ಳಿ ಗ್ರಾಮದ ಕೃಷ್ಣೆಗೌಡರ ಪುತ್ರ, ಕೆ.ವೆಂಕಟೇಶ್ ಅವರಿಗೆ ಸೇರಿದ ಎರಡು ಎಕರೆ ಅಡಿಕೆ ತೋಟದಲ್ಲಿನ ಗಿಡಗಳನ್ನು ಕಡಿದು ಹಾಕಲಾಗಿದೆ. ವೆಂಕಟೇಶ್ ಬೆಳಿಗ್ಗೆದ್ದು ತೋಟದ ಪರಿಸ್ಥಿತಿ ನೋಡಿ ಗೋಳಾಡುತ್ತಿದ್ದಾರೆ. ಪಕ್ಕದ ಜಮೀನಿನ ರೈತರು ಬಂದು ಸಮಾಧಾನಪಡಿಸಿದ್ದಾರೆ.
ರೈತ ವೆಂಕಟೇಶ್ ಪ್ರತಿಕ್ರಿಯೆ: ”ಎರಡ್ಮೂರು ದಿನಗಳ ಹಿಂದೆ ಅರ್ಧ ಎಕರೆ ಶುಂಠಿ ಕಳ್ಳತನವಾಗಿತ್ತು. ಆಗ ನಾವು ಪೊಲೀಸರಿಗೆ ದೂರು ನೀಡಿದ್ದೆವು. ಪೊಲೀಸರು ಬಂದು ಸ್ಥಳ ಮಹಜರು ಮಾಡಿ ದೂರು ದಾಖಲಿಸಿಕೊಂಡಿದ್ದರು. ಆದರೆ, ಆರೋಪಿಗಳನ್ನು ಸೆರೆ ಹಿಡಿದಿಲ್ಲ. ಪೊಲೀಸರು ಫೋನ್ ಟ್ರ್ಯಾಕ್ ಮಾಡುತ್ತೇವೆ ಎಂದಿದ್ದರು. ನಿನ್ನೆ ರಾತ್ರಿ ನೂರಾರು ಅಡಿಕೆ ಮರಗಳನ್ನು ಕತ್ತರಿಸಿದ್ದಾರೆ. ಈ ಹಿಂದೆ ನಮ್ಮ ಹುಡುಗಿಯ ಮದುವೆ ಮಾಡಲು ಸಿದ್ದವಾಗಿದ್ದೆವು. ಆದರೆ, ಆ ಯುವಕ ಬೇರೆ ಬೇರೆ ಕೆಟ್ಟಚಟಗಳಿಗೆ ದಾಸನಾಗಿದ್ದು ತಿಳಿಯಿತು. ಆದ್ದರಿಂದ ನಮ್ಮ ಹುಡುಗಿ ಆತ ಬೇಡ ಎಂದಿದ್ದಳು. ಈ ಹಿನ್ನೆಲೆಯಲ್ಲಿ ದ್ವೇಷ ಸಾಧಿಸುತ್ತಿದ್ದಾನೆ. ಆರೋಪಿಯ ಹೆಸರು ಅಶೋಕ ತಮ್ಮೇಗೌಡ” ಎಂದು ವೆಂಕಟೇಶ್ ಆರೋಪಿಸಿದರು.