ಹಾಸನ : ಹಳೆಯ ದ್ವೇಷದ ಹಿನ್ನೆಲೆ ಹಾಡಹಗಲೇ ಗ್ರಾನೈಟ್ ಉದ್ಯಮಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹಾಸನದ ಹೊರವಲಯದ ಬಳಿ ನಡೆದಿದೆ.
ಕೃಷ್ಣೇಗೌಡ (55) ಕೊಲೆಯಾದ ಮೃತ ಗ್ರಾನೈಟ್ ಉದ್ಯಮಿ.
ಹಾಸನ ಮೂಲದ ಕೃಷ್ಣೇಗೌಡ, ಹಾಸನದ ಡೈರಿ ವೃತ್ತದ ಸಮೀಪ ಶ್ರೀರಾಮ ಮಾರ್ಬಲ್ ಎಂಬ ಉದ್ಯಮವನ್ನು ನಡೆಸುತ್ತಿದ್ದರು. ಜೊತೆಗೆ ಜೆಡಿಎಸ್ ಮುಖಂಡರಾಗಿರುವ ಇವರು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಆಪ್ತರಾಗಿದ್ದರು.
ಇಂದು ಬೆಳಗ್ಗೆ ಎಂದಿನಂತೆ ತಮ್ಮ ಗ್ರಾನೈಟ್ ಫ್ಯಾಕ್ಟರಿಗೆ ಹೋಗಿ ವಾಪಸ್ ತಮ್ಮ ಇನ್ನೋವಾ ವಾಹನವನ್ನು ಹತ್ತಲು ಮುಂದಾದಾಗ, ಕೆಲವು ದುಷ್ಕರ್ಮಿಗಳು ಏಕಾಏಕಿ ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.
ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ: ಇಂದು ಹಾಸನ ಗ್ರಾನೈಟ್ ಫ್ಯಾಕ್ಟರಿ ಎದುರುಗಡೆ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ, ಕೆಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಈ ಸಂಬಂಧ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.