ಬೆಳಗಾವಿ: ”ಪಕ್ಷ ಭೇದ ಮರೆತು ಕೆಲಸ ಮಾಡಿದಾಗ ಮಾತ್ರ ಬೆಂಗಳೂರಿಗೆ ಸಮಾನಾಂತರವಾಗಿ ಬೆಳಗಾವಿ ಜಿಲ್ಲೆಯೂ ಬೆಳೆಯಲು ಸಾಧ್ಯವಾಗುತ್ತದೆ” ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ಮಚ್ಛೆ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ಇಂದು (ಮಂಗಳವಾರ) 260 ಕೋಟಿ ರೂಪಾಯಿ ವೆಚ್ಚದ 220 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಹಾಗೂ ಬಹುವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
”ಬೆಳಗಾವಿ ನಗರ ರಾಜ್ಯದಲ್ಲಿ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ. ಉದ್ಯಮ, ವಸತಿ ಸೇರಿದಂತೆ ಎಲ್ಲ ರೀತಿಯಿಂದಲೂ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ಪೂರಕವಾಗಿ ನೀರು, ವಿದ್ಯುತ್ ಸೇರಿದಂತೆ ಸಕಲ ರೀತಿಯ ಮೂಲಸೌಕರ್ಯ ಒದಗಿಸಲು ಸರಕಾರ ಬದ್ಧವಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಅನೇಕ ಕೆಲಸಗಳಾಗಬೇಕಿದೆ” ಎಂದು ಹೇಳಿದರು.
”ಈ ಭಾಗದ ಕೈಗಾರಿಕೋದ್ಯಮಿಗಳ ಬಹುದಿನಗಳ ಬೇಡಿಕೆಯ ಪ್ರಕಾರ 220 ಕೆ.ವಿ. ಹೊಸ ವಿದ್ಯುತ್ ಕೇಂದ್ರದ ನಿರ್ಮಾಣ ಮಾಡಲಾಗುತ್ತಿದೆ. ಉದ್ಯಮಗಳಿಗೆ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಪೂರೈಕೆ ಅಗತ್ಯವಿದ್ದು, ಈ ಕೇಂದ್ರದಿಂದ ಅನುಕೂಲವಾಗಲಿದೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಸಬೇಕು. ಸದ್ಯಕ್ಕಿರುವ ಜಾಗದಲ್ಲಿ 220 ಕೆ.ವಿ. ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. 39 ಕಿ.ಮೀ. ಉದ್ದದ ಬಹುವಿದ್ಯುತ್ ಪ್ರಸರಣ ಮಾರ್ಗ ನಿರ್ಮಿಸಲು ಉದ್ಧೇಶಿಸಲಾಗಿದೆ. 250 ಕೋಟಿ ರೂ. ವೆಚ್ಚದ ಯೋಜನೆ ಇದು. ಈ ಭಾಗದ ಕೈಗಾರಿಕೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಅನುಕೂಲವಾಗಲಿದೆ” ಎಂದು ಸಚಿವರು ತಿಳಿಸಿದರು.