ಬೆಂಗಳೂರು: ”ಶಾಸಕರ ಶಿಫಾರಸ್ಸು ಪತ್ರ ಪರಿಶೀಲನೆ ಮಾಡಿ ವರ್ಗಾವಣೆ ಮಾಡಲಾಗುವುದು” ಎಂದು ಗೃಹ ಸಚಿವ ಡಾ.
ಜಿ. ಪರಮೇಶ್ವರ್ ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ”ಬಹುಶಃ ಇನ್ನೊಂದು ವಾರದಲ್ಲಿ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪೂರ್ಣವಾಗಲಿದೆ. ಒಂದು ವಾರದೊಳಗೆ ಅಂತಿಮ ಮಾಡುತ್ತೇವೆ. ವರ್ಗಾವಣೆಗೆ ಶಾಸಕರ ಶಿಫಾರಸ್ಸು ಪತ್ರ ಒಂದು ಹಂತ. ಶಾಸಕರ ಶಿಫಾರಸ್ಸು ಪತ್ರ ಪರಿಶೀಲನೆ ಮಾಡಿ ವರ್ಗಾವಣೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆ: ”ಸದಾಶಿವ ಆಯೋಗದ ವರದಿ ಜಾರಿಗೆ ನಾವು ಕಮಿಟ್ ಆಗಿದ್ದೇವೆ” ಎಂದು ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. ”ಬಿಜೆಪಿಯವರು ಹಿಂದೆ ಶೇ 2% ಹಂಚಿಕೆ ಮಾಡಿದ್ದಾರೆ. ಆದರೆ, ಅವರ ಕೇಂದ್ರ ಮಂತ್ರಿ ನಾರಾಯಣಸ್ವಾಮಿಯೇ ಇದು ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ನಾವು ಕುಳಿತು ಚರ್ಚೆ ಮಾಡುತ್ತೇವೆ. ಯಾರಿಗೆ ಎಷ್ಟೆಷ್ಟು ಮೀಸಲಾತಿ ಹಂಚಿಕೆ ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.
ನ್ಯಾಯ ಎತ್ತಿ ಹಿಡಿದ ಉಚ್ಚ ನ್ಯಾಯಾಲಯ: ರಾಹುಲ್ ಗಾಂಧಿ ಅನರ್ಹತೆ ವಾಪಸ್ ಪಡೆದ ವಿಚಾರವಾಗಿ ಪ್ರತಿಕ್ರಿಯಿಸುತ್ತ, ”ನ್ಯಾಯಾಲಯ ನಿಜವಾಗಿ ನ್ಯಾಯ ಎತ್ತಿ ಹಿಡಿಯುತ್ತೆ ಅನ್ನೋದಕ್ಕೆ ಇದು ಒಂದು ನಿದರ್ಶನ. ರಾಹುಲ್ ಪ್ರಚಾರದ ವೇಳೆ ಆಡಿದ ಒಂದು ಮಾತಿಗೆ ಲಕ್ಷಾಂತರ ಮತದಾರರು ಆಯ್ಕೆ ಮಾಡಿದ ಸಂಸತ್ ಸದಸ್ಯತ್ವ ರದ್ದು ಮಾಡಲಾಗಿತ್ತು. ಅದು ನ್ಯಾಯ ಸಮ್ಮತವಲ್ಲ ಎಂಬ ದೃಷ್ಟಿಕೋನದಲ್ಲಿ ಉಚ್ಚ ನ್ಯಾಯಾಲಯ ಹೇಳಿದೆ” ಎಂದರು.