ಬೆಂಗಳೂರು: ”ಜಲ ಮೂಲಗಳಾದ ನದಿ, ಕೆರೆ ಮತ್ತು ನಾಲೆಗಳ ಸಂರಕ್ಷಣೆಗೆ ಸ್ವಯಂ ಸೇವಕರು ಹಾಗೂ ಗ್ರಾಮೀಣ ಸಮುದಾಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಚಿಂತನೆ ನಡೆಸಿದೆ” ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.
ಎಸ್. ಬೋಸರಾಜು ಹೇಳಿದರು.
ವಿಕಾಸಸೌಧದಲ್ಲಿ ಶನಿವಾರ ಸಚಿವರನ್ನು ಭೇಟಿ ಮಾಡಿದ ಆರ್ಟ್ ಆಫ್ ಲಿವಿಂಗ್ ರಿವರ್ ರಿಜ್ಯೂವಿನೇಷನ್ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕರಾದ ಡಾ. ಲಿಂಗರಾಜು ಯಾಲೆ ಅವರ ನೇತೃತ್ವದ ತಂಡದೊಂದಿಗೆ ರಾಜ್ಯದ ಕೆರೆಗಳ ಅಧ್ಯಯನ ಹಾಗೂ ಜಲ ಮೂಲಗಳ ಪುನರುಜ್ಜೀವನದ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.
ಸಭೆಯಲ್ಲಿ ರಾಜ್ಯದ ಜಲಮೂಲಗಳನ್ನ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದಂತಹ ಅಂಶಗಳ ಬಗ್ಗೆ ಹಾಗೂ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಕೈಗೊಳ್ಳಲಾಗುತ್ತಿರುವ ಯೋಜನೆಗಳ ಬಗ್ಗೆ ಆರ್ಟ್ ಆಫ್ ಲಿವಿಂಗ್ ರಿವರ್ ರಿಜ್ಯೂವಿನೇಷನ್ ಸಂಸ್ಥೆಯ ಪ್ರಮುಖರು ಸಚಿವರಿಗೆ ಮಾಹಿತಿ ನೀಡಿದರು. ನೈಸರ್ಗಿಕ ಕ್ರಮಗಳ ಆಧಾರದ ಮೇಲೆ ಬತ್ತಿರುವ ಹಾಗೂ ಕ್ಷೀಣಿಸುತ್ತಿರುವ ಜಲಮೂಲಗಳನ್ನು ಪುನರುಜ್ಜೀವನಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ದೇಶಾದ್ಯಂತ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಕುಮದ್ವತಿ, ಸುವರ್ಣಮುಖಿ ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.
ಕೆರೆಗಳು, ನಾಲೆಗಳು ಹಾಗೂ ಜಲಮೂಲಗಳ ಸಂರಕ್ಷಣೆ ಮತ್ತು ಅವುಗಳ ಒತ್ತುವರಿಯನ್ನು ತಡೆಗಟ್ಟುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಸಂರಕ್ಷಣೆ ಮತ್ತು ಒತ್ತುವರಿ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವ ಬಹಳ ಪ್ರಮುಖವಾಗಿದೆ. ಜಲಮೂಲಗಳ ಸಂರಕ್ಷಣೆಗೆ ಸ್ವಯಂ ಸೇವಕರು ಮತ್ತು ಗ್ರಾಮೀಣ ಸಮುದಾಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲೂ ಚಿಂತಿಸಲಾಗುತ್ತಿದೆ. ಗ್ರಾಮೀಣ ಸಮುದಾಯದ ಸ್ವಯಂ ಸೇವಕರು ತಮ್ಮ ವ್ಯಾಪ್ತಿಯಲ್ಲಿರುವ ಜಲ ಮೂಲಗಳ ಬಗ್ಗೆ ನಿಗಾವಹಿಸುವುದು ಹಾಗೂ ಯಾವುದೇ ಕೊರತೆ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವ ಕೆಲಸ ಇವರದ್ದಾಗಿರುತ್ತದೆ. ಪ್ರಾಥಮಿಕ ಹಂತದಲ್ಲಿ ಚಿಂತನೆ ನಡೆದಿದ್ದು, ಇದರ ಅನುಷ್ಠಾನದ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.