Breaking News

ನೈಸ್ ಹಗರಣದ ದಾಖಲೆಗಳನ್ನು ಪ್ರಧಾನಿ ಮೋದಿಗೆ ಕೊಡುತ್ತೇನೆ,:H.D.K

Spread the love

ಬೆಂಗಳೂರು : ನೈಸ್ ರಸ್ತೆ ಮಾಡುವ ಸಂದರ್ಭದಲ್ಲಿ ರೈತರ ಜಮೀನನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದೊಂದು ದೊಡ್ಡ ಹಗರಣವಾಗಿದ್ದು, ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದೇನೆ. ನೈಸ್ ಹಗರಣದ ದಾಖಲೆಗಳನ್ನು ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರೈತರ ಹೆಸರಿನಲ್ಲಿ ಕೋಟಿ, ಕೋಟಿ ಹಣ ಲೂಟಿಯಾಗಿದೆ. ನೈಸ್ ಸಂಸ್ಥೆ ವಿರುದ್ಧ ದೂರು ನೀಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮಯ ಕೇಳುತ್ತಿದ್ದೇನೆ. ಅವರಿಗೂ ಈ ದಾಖಲೆಗಳನ್ನು ನೀಡುತ್ತೇನೆ. ನೈಸ್ ಹೆಸರಿನಲ್ಲಿ ನಡೆದಿರುವ ಅಕ್ರಮವನ್ನು ಬಯಲಿಗೆ ಎಳೆಯುವವರೆಗೂ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.

ಬಿಜೆಪಿಯವರು ಭ್ರಷ್ಟಾಚಾರವನ್ನು ಮಟ್ಟ ಹಾಕಬೇಕು ಎಂದಿದ್ದರೆ ನೈಸ್ ವಿಚಾರದಲ್ಲಿ ಯಾವ ರೀತಿ ತನಿಖೆ ಮಾಡುತ್ತಾರೆಂದು ಕಾದು ನೋಡುತ್ತೇನೆ. ಕಳೆದ ಮೂವತ್ತು ವರ್ಷಗಳಿಂದ ಯೋಜನೆಯೂ ಪೂರ್ಣಗೊಂಡಿಲ್ಲ. ಜಮೀನುಗಳ ದುರುಪಯೋಗಗಳೂ ಕಡಿಮೆಯಾಗಿಲ್ಲ. ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಸಿಂಗಾಪುರ ಪ್ರವಾಸದಲ್ಲಿದ್ದೆ. ಆಗ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ನನ್ನನ್ನು ಅಲ್ಲಿಗೇ ಹುಡುಕಿಕೊಂಡು ಬಂದಿದ್ದರು. ಆದರೆ ನಾನು ಯಾವುದೇ ವಿಚಾರಗಳಿದ್ದರೂ ವಿಧಾನಸೌಧಕ್ಕೆ ಬಂದು ಚರ್ಚೆ ಮಾಡಿ, ಇಲ್ಲಿ ಬೇಡ ಎಂದು ನಾನು ಬೈದು ಕಳುಹಿಸಿದ್ದೆ ಎಂದು ಹೇಳಿದರು.

ನೈಸ್ ಹಗರಣದ ಕುರಿತು ವರದಿ ನೀಡಿರುವ ಕಾಂಗ್ರೆಸ್​ನ ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ರೈತರ ಹೆಸರಿನಲ್ಲಿ ಬೆದರಿಕೆ ಹಾಕಿದವರು ಯಾರು?. ಜಯಚಂದ್ರ ಅವರೇ ಯಾವುದೋ ಸ್ಥಾನಕ್ಕಾಗಿ ಮೌನವಾಗಿರಬೇಡಿ, ಯಾರು ಬೆದರಿಕೆ ಹಾಕಿದ್ದಾರೆ ಎಂಬುದನ್ನು ರಾಜ್ಯದ ಜನತೆ ಮುಂದೆ ಹೇಳಿ. ಬಡ ರೈತರ ಭೂಮಿ ಉಳಿಸುವುದಕ್ಕೆ ಪ್ರಾಮಾಣಿಕ ಕೆಲಸ ಮಾಡಿದ್ದೀರಿ. ಪಕ್ಷ ರಾಜಕೀಯ ಸ್ಥಾನಮಾನಕ್ಕಿಂತ ನಾಡಿನ ಜನತೆಯ ಬದುಕಿನ ಪ್ರಶ್ನೆ ಮುಖ್ಯ ಎಂದು ಹೆಚ್​​ಡಿಕೆ ಹೇಳಿದರು.

ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ ಹೆಚ್​​ಡಿಕೆ : ಎಸ್‍ಪಿ ರೋಡ್​ನಿಂದ ಪೆನ್‍ ಡ್ರೈವ್ ತರುವ ಅಗತ್ಯವಿಲ್ಲ. ನಾನು ಯಾವುದೇ ನಕಲಿ ದಾಖಲೆ ಸೃಷ್ಟಿಸಿಲ್ಲ. ವರ್ಗಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ ಪೆನ್‌ ಡ್ರೈವ್ ಬಿಡುಗಡೆ ಮಾಡುತ್ತೇನೆ. ಕ್ರಮ ತೆಗೆದುಕೊಳ್ಳುವ ಧಮ್ಮು ತಾಕತ್ತು ಸರ್ಕಾರಕ್ಕೆ ಇದೆಯೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದರು.


Spread the love

About Laxminews 24x7

Check Also

ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆ: ಡಿಜಿಟಲ್ ಅರೆಸ್ಟ್​​ನಿಂದ 84 ಲಕ್ಷ ರೂ. ವಂಚನೆಗೆ ಬ್ರೇಕ್

Spread the loveಮಂಗಳೂರು: ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎಂದು ಖದೀಮರು ಅಮಾಯಕರನ್ನು ವಂಚಿಸಿ ಕೋಟಿಗಟ್ಟಲೆ ಹಣ ವಂಚಿಸುತ್ತಿರುವುದು ಬೆಳಕಿಗೆ ಬರುತ್ತಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ