ಗೃಹಜ್ಯೋತಿ ಯೋಜನೆಗಾಗಿ ಬೆಳಗಾವಿ ಜಿಲ್ಲೆಗೆ ಪ್ರತಿವರ್ಷಕ್ಕೆ 516 ಕೋಟಿ ರೂಪಾಯಿಗಳನ್ನು ಸರಕಾರವು ನೀಡಲಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಪ್ರತಿ ಕುಟುಂಬಕ್ಕೆ ತಿಂಗಳಿಗೆ 4 ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಲಿದೆ. ಇದು ಮಕ್ಕಳ ಶಿಕ್ಷಣ ಹಾಗೂ ಕುಟುಂಬ ನಿರ್ವಹಣೆಗೆ ಬಳಕೆಯಾಗಬೇಕು. ಅಂದಾಗ ಮಾತ್ರ ಸರಕಾರದ ಗ್ಯಾರಂಟಿ ಯೋಜನೆಗಳು ಸಾರ್ಥಕವಾಗಲಿವೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕುಮಾರ್ ಗಂಧರ್ವ ಕಲಾಮಂದಿರದಲ್ಲಿ ಶನಿವಾರ(ಆ.5) 200 ಯುನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಗ್ಯಾರಂಟಿ ಯೋಜನೆಯಾಗಿರುವ “ಗೃಹಜ್ಯೋತಿ” ಯೋಜನೆಗೆ ಚಾಲನೆ ನೀಡಿ, ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ನೀಡಿರುವ ಗ್ಯಾರಂಟಿಯ ಪ್ರಕಾರ “ಗೃಹಜ್ಯೋತಿ” ಯೋಜನೆಯನ್ನು ಅನುಷ್ಢಾನಗೊಳಿಸುವ ಮೂಲಕ ನಮ್ಮ ಸರಕಾರವು ನುಡಿದಂತೆ ನಡೆದಿದೆ.
ಮೂರು ತಿಂಗಳ ಅವಧಿಯಲ್ಲಿ ಜಾರಿಗೊಳಿಸಲಾಗುತ್ತಿದೆ. ಇನ್ನುಳಿದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.
ಇಷ್ಟೊಂದು ದೊಡ್ಡ ಮೊತ್ತವನ್ನು ಸರಕಾರ ಹೇಗೆ ಹೊಂದಾಣಿಕೆ ಮಾಡಲಿದೆ ಎಂಬ ಆತಂಕವಿತ್ತು. ಆದರೆ ಮುಖ್ಯಮಂತ್ರಿಗಳು ಇದನ್ನು ಸುಗಮವಾಗಿ ಜಾರಿಗೊಳಿಸುವ ಮೂಲಕ ನಮ್ಮ ಸರಕಾರ ಬಡವರ ಪರ ಎಂಬುದನ್ನು ಸಾಬೀತುಪಡಿಸಿದೆ.
ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದರು.ಗೃಹಜ್ಯೋತಿ ಯೋಜನೆಯಿಂದ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು.
ಬೆಳಗಾವಿಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಗ್ರಾಹಕರಿಗೆ ಇದರ ಪ್ರಯೋಜನೆ ದೊರಕಲಿದ್ದು, ಇದುವರೆಗೆ ಶೇ.80ರಷ್ಟು ಗ್ರಾಹಕತು ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ