ಉಡುಪಿ ಸಣ್ಣಪುಟ್ಟ ವ್ಯಾಜ್ಯಗಳನ್ನು ಕೆಳಹಂತದ ಕೋರ್ಟ್ ನಲ್ಲೆ ಇತ್ಯರ್ಥಗೊಳಿಸುವ ಮೂಲಕ ನ್ಯಾಯಾಧೀಶರು ಹಾಗೂ ವಕೀಲರು ಬಡ ಕಕ್ಷಿದಾರರ ಹಿತ ಕಾಯಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಬ್ರಹ್ಮಾವರದಲ್ಲಿ ನೂತನವಾಗಿ ನಿರ್ಮಿಸಲಾದ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ಕೋರ್ಟ್ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಇಡೀ ವಿಶ್ವಕ್ಕೆ ನಮ್ಮ ದೇಶದ ಕಾನೂನು ಮಾದರಿಯಾಗಿದ್ದು, ಸಣ್ಣಪುಟ್ಟ ವ್ಯಾಜ್ಯಗಳನ್ನು ಕೆಳಹಂತದ ಕೋರ್ಟ್ ನಲ್ಲೇ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದರು.
ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನವಾದ ಕಾನೂನು ನೀಡಲಾಗಿದೆ. ದುರ್ಬಲರ ಮನೆ ಬಾಗಿಲಿಗೆ ನ್ಯಾಯಾಂಗದ ಸೌಲಭ್ಯ ತಲುಪಿಸಿದಾಗ ಮಾತ್ರ ಸಂವಿಧಾನದ ಆಶಯ ಈಡೇರುತ್ತದೆ. ಆ ದಿಸೆಯಲ್ಲಿ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು.
ಹಿರಿಯರಾದ, ಅನುಭವಿಗಳಾದ ಎಚ್.ಕೆ.ಪಾಟೀಲ ಅವರು ಕಾನೂನು ಸಚಿವರಾಗಿದ್ದಾರೆ. ಅವರ ನೇತೃತ್ವದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಮನೆ ಬಾಗಿಲಿಗೆ ತಲುಪಿಸಲು, ಇರುವ ಸಮಸ್ಯೆಗಳನ್ನು ನಿವಾರಿಸಲು ಸರಕಾರ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು. ವಿಳಂಬ ನ್ಯಾಯದಾನ ನ್ಯಾಯವನ್ನು ನಿರಾಕರಿಸಿದಂತೆ ಎನ್ನುವ ಮಾತಿದೆ. ಹೆಚ್ಚು ಹೆಚ್ಚು ನ್ಯಾಯಾಲಯಗಳನ್ನು ತೆರೆಯುವ ಮೂಲಕ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸಲು ಅವಕಾಶವಾಗುತ್ತದೆ.