ನವದೆಹಲಿ: ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸುಪ್ರಿಂ ಕೋರ್ಟ್‌ನಲ್ಲಿ ಇಂದು (ಶುಕ್ರವಾರ) ದೊಡ್ಡ ರಿಲೀಫ್ ಸಿಕ್ಕಿದೆ.
ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಅವರಿಗೆ ವಿಧಿಸಲಾಗಿದ್ದ 2 ವರ್ಷಗಳ ಶಿಕ್ಷೆಗೆ ಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೀಗಾಗಿ ರಾಹುಲ್ ಅವರ ಸಂಸತ್ ಸದಸ್ಯ ಸ್ಥಾನ ಸದ್ಯಕ್ಕೆ ಅಬಾಧಿತವಾಗಿದೆ.
ನ್ಯಾ.ಬಿ.ಆರ್.ಗವಾಯಿ, ನ್ಯಾ.ಪಿ.ಎಸ್.ನರಸಿಂಹ ಮತ್ತು ನ್ಯಾ.ಸಂಜಯ್ ಕುಮಾರ್ ಅವರಿದ್ದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠವು ಈ ಆದೇಶ ಪ್ರಕಟಿಸಿ, “ಸಾರ್ವಜನಿಕ ಜೀವನದಲ್ಲಿರುವ ಜನರು ಭಾಷಣ ಮಾಡುವಾಗ ಎಚ್ಚರಿಕೆ ವಹಿಸಬೇಕು. ಅದನ್ನೇ ಎಲ್ಲರೂ ನಿರೀಕ್ಷಿಸುತ್ತಾರೆ” ಎಂದು ಸಲಹೆ ನೀಡಿದೆ.
“ಗುಜರಾತ್ ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ಶಿಕ್ಷೆ ವಿಧಿಸುವಾಗ ಸೂಕ್ತ ಕಾರಣಗಳನ್ನು ನೀಡಿರುವುದಿಲ್ಲ. ಮುಂದಿನ ವಿಚಾರಣೆಯವರೆಗೂ ಶಿಕ್ಷೆಗೆ ತಡೆ ನೀಡಲಾಗುತ್ತದೆ” ಎಂದು ಇದೇ ವೇಳೆ ನ್ಯಾಯಪೀಠ ಹೇಳಿದೆ.