ನವದೆಹಲಿ, ನ.1-ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಸಂಗ್ರಹ ಎಂಟು ತಿಂಗಳಲ್ಲಿ ಇದೇ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ.ಗಳು ದಾಟಿದೆ. ಅಕ್ಟೋಬರ್‍ನಲ್ಲಿ ಜಿಎಸ್‍ಟಿ ಸಂಗ್ರಹ 1.05 ಲಕ್ಷ ಕೋಟಿ ರೂ.ಗಳಷ್ಟು ದಾಖಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ಅಕ್ಟೋಬರ್ 31, 2020ಕ್ಕೆ ಕೊನೆಗೊಂಡ ಅವಧಿಯಲ್ಲಿ ಒಟ್ಟು 80 ಲಕ್ಷ ಜಿಎಸ್‍ಟಿಆರ್-3ಬಿ ರಿಟನ್ರ್ಸ್ ಸಲ್ಲಿಕೆಯಾಗಿವೆ ಎಂದು ತಿಳಿಸಿದೆ.
ಅಕ್ಟೋಬರ್‍ನಲ್ಲಿ ಒಟ್ಟು 1,05,555 ಕೋಟಿ ರೂ.ಗಳ ಜಿಎಸ್‍ಟಿ ಸಂಗ್ರಹವಾಗಿದೆ. ಇದರಲ್ಲಿ 19,193 ಕೋಟಿ ರೂ. ಸಿಜಿಎಸ್‍ಟಿ, 5,411 ಕೋಟಿ ರೂ.ಗಳು ಎಸ್‍ಜಿಎಸ್‍ಟಿ, 52,540 ಕೋಟಿ ರೂ. ಐಜಿಎಸ್‍ಟಿ (ಸರಕುಗಳ ಆಮದು ಮೇಲೆ ಸಂಗ್ರಹಿಸಲಾದ 23,375 ಕೋಟಿ ರೂ.ಗಳೂ ಸೇರಿ) ಹಾಗೂ 8,011 ಕೋಟಿ ರೂ. ಸುಂಕ (ಸರಕುಗಳ ಆಮದು ಮೇಲೆ ಸಂಗ್ರಹಿಸಲಾದ 932 ಕೋಟಿ ರೂ.ಗಳೂ ಸೇರಿ)-ಇವುಗಳು ಸೇರಿವೆ ಎಂದು ವಿತ್ತ ಸಚಿವಾಲಯ ಅಂಕಿಅಂಶ ನೀಡಿದೆ.
ಕಳೆದ ವರ್ಷದಲ್ಲಿ ಇದೇ ಅವಧಿಗೆ ಹೋಲಿಸಿದಲ್ಲಿ ಆದಾಯದಲ್ಲಿ ಶೇ.10ರಷ್ಟು ಹೆಚ್ಚಳ ಕಂಡು ಬಂದಿದೆ. ಕಳೆದ ವರ್ಷ ಅಕ್ಟೋಬರ್‍ನಲ್ಲಿ 95,379 ಕೋಟಿ ರೂ.ಗಳು ಸಂಗ್ರಹವಾಗಿತ್ತು. ದೇಶದಲ್ಲಿ ಕಳೆದ ಏಳು ತಿಂಗಳಿನಿಂದ ಕೊರೊನಾ ವೈರಸ್ ಪಿಡುಗಿನಿಂದಾಗಿ ದೇಶದ ಆರ್ಥಿಕತೆ ಮೇಲೆ ದುಷ್ಪರಿಣಾಮ ಉಂಟಾಗಿರುವ ಸಂದರ್ಭದಲ್ಲೇ 1.05 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಜಿಎಸ್‍ಟಿ ಸಂಗ್ರಹವಾಗಿರುವುದು ಮಹತ್ವದ ಸಂಗತಿಯಾಗಿದೆ.