ಬೆಂಗಳೂರು, ನ.1- ಕಿಲ್ಲರ್ ಕೊರೊನಾ ವೈರಸ್ ಹಾವಳಿ ಇಳಿಮುಖವಾಗುತ್ತಿರುವ ಸಂತಸದಲ್ಲಿದ್ದ ಯೂರೋಪ್ ಖಂಡದ ಅನೇಕ ರಾಷ್ಟ್ರಗಳ ಜನತೆಗೆ ಹೆಮ್ಮಾರಿಯ ಎರಡನೆ ಹಂತದ ದಾಳಿ ಬರಸಿಡಿಲು ಬಡಿದಂತಾಗಿದೆ. ಕೊರೊನಾ ಎರಡನೆ ಅಲೆಯ ಆರ್ಭಟ ತೀವ್ರವಾಗಿದ್ದು, ದಿನನಿತ್ಯದ ಸೋಂಕು, ಸಾವು ಮತ್ತು ಸಕ್ರಿಯ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ವಿವಿಧ ದೇಶಗಳಲ್ಲಿ ಮತ್ತೆ ಲಾಕ್‍ಡೌನ್ ಜಾರಿಗೊಳಿಸಲಾಗಿದೆ.
ಫ್ರಾನ್ಸ್, ಜರ್ಮನಿ, ಸ್ಪೇನ್ ನಂತರ ಈಗ ಇಂಗ್ಲೆಂಡ್‍ನಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ನಾಲ್ಕು ವಾರಗಳ ಕಾಲ ಲಾಕ್‍ಡೌನ್ ಮತ್ತು ಕಠಿಣ ನಿರ್ಬಂಧಗಳು ಜಾರಿಯಲ್ಲಿರಲಿವೆ ಎಂದು ಬ್ರಿಟನ್ ಪ್ರಧಾನಮಂತ್ರಿ ಬೌರಿಸ್ ಜಾನ್ಸನ್ ಘೋಷಿಸಿದ್ದಾರೆ. ಇಟಲಿ, ಬೆಲ್ಜಿಯಂ, ಆಸ್ಟ್ರಿಯಾ, ಗ್ರೀಸ್, ಅರ್ಜೆಂಟೀನಾ ಮೊದಲಾದ ರಾಷ್ಟ್ರಗಳಲ್ಲೂ ಸಹ ಲಾಕ್‍ಡೌನ್ ಜಾರಿಗೊಳಿಸಲು ಸಿದ್ಧತೆಗಳು ನಡೆದಿವೆ.
ಯೂರೋಪ್ ಮತ್ತು ಲ್ಯಾಟಿನ್ ಅಮೆರಿಕ ರಾಷ್ಟ್ರಗಳಲ್ಲಿ ಸೆಪ್ಟೆಂಬರ್‍ನಿಂದ ಎರಡನೆ ಅಲೆಯ ಆರ್ಭಟ ಕ್ರಮೇಣ ಏರತೊಡಗಿದ್ದು, ಕಿಲ್ಲರ್ ವೈರಸ್ ನಿಗ್ರಹ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಮ್ಮಾರಿಯನ್ನು ಹತೋಟಿಯಲ್ಲಿಡುವ ಸಲುವಾಗಿ ಹಲವು ದೇಶಗಳಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಗುತ್ತಿದೆ. ಅಮೆರಿಕ, ರಷ್ಯಾ, ಬ್ರೆಜಿಲ್, ಫ್ರಾನ್ಸ್, ಸ್ಪೇನ್, ಮೆಕ್ಸಿಕೋ, ಪೆರೂ, ಅರ್ಜೆಂಟೀನಾ ಮೊದಲಾದ ದೇಶಗಳು ವೈರಸ್‍ನ ಎರಡನೆ ದಾಳಿಯಿಂದ ತತ್ತರಿಸುತ್ತಿದ್ದು, ಮತ್ತೆ ಗಂಡಾಂತರ ಪರಿಸ್ಥಿತಿ ಎದುರಾಗಿದೆ.
ಡಿಸೆಂಬರ್ ಅಂತ್ಯದ ವೇಳೆಗೆ ಅಥವಾ ಹೊಸ ವರ್ಷದ ಆರಂಭದಲ್ಲಿ ಲಸಿಕೆ ಲಭ್ಯವಾಗಲಿದ್ದು, ಅಲ್ಲಿಯವರೆಗೆ ಮುಂಜಾಗ್ರತಾ ಕ್ರಮವಾಗಿ ಲಾಕ್‍ಡೌನ್ ಮತ್ತು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲು ಇನ್ನೂ ಕೆಲವು ರಾಷ್ಟ್ರಗಳು ಮುಂದಾಗಿವೆ. ಹಲವು ದೇಶಗಳಲ್ಲಿ ಈಗಾಗಲೇ ಭಾಗಶಃ ಲಾಕ್‍ಡೌನ್, ರಾತ್ರಿ ಕಫ್ರ್ಯೂ ಸೇರಿದಂತೆ ಅನೇಕ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.