Home / ರಾಜಕೀಯ / ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ, ಬಿಜೆಪಿಯಲ್ಲಿ ಹೊಸ ಚರ್ಚೆ ಆರಂಭ

ದಲಿತರಿಗೆ ರಾಜ್ಯಾಧ್ಯಕ್ಷ ಸ್ಥಾನ, ಬಿಜೆಪಿಯಲ್ಲಿ ಹೊಸ ಚರ್ಚೆ ಆರಂಭ

Spread the love

ಬೆಂಗಳೂರು: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬಂದಿದ್ದ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೆಸರು ನಿಧಾನಕ್ಕೆ ಮರೆಯಾಗುತ್ತಿದ್ದು, ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೆಸರು ಈಗ ಮುನ್ನಲೆಗೆ ಬಂದಿದೆ.

ಬಿಎಸ್​ವೈ ಜೊತೆ ಉತ್ತಮ ಒಡನಾಟ ಹಾಗೂ ದಲಿತರಿಗೆ ಅವಕಾಶ ಎನ್ನುವ ಕಾರಣದಿಂದಾಗಿ ಲಿಂಬಾವಳಿ ಹೆಸರು ಕೇಳಿಬಂದಿದೆ. ಒಂದು ಪಕ್ಷ ನಡೆಸುವ ತಾಕತ್ತು ದಲಿತರಿಗೆ ಇದ್ದರೆ ಯಾಕೆ ಅವಕಾಶ ಕೊಡಬಾರದು? ದಲಿತರೂ ರಾಜ್ಯಾಧ್ಯಕ್ಷ ಆಗಬಹುದು ಎಂದು ಬಿಜೆಪಿ ಎಸ್​​ಸಿ ಮೋರ್ಚಾ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿರುವುದು ಲಿಂಬಾವಳಿಗೆ ಅವಕಾಶ ಸಾಧ್ಯತೆಗೆ ಪುಷ್ಟಿ ನೀಡಿದೆ.

ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ, ಲಿಂಗಾಯತ ಸಮುದಾಯಕ್ಕೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಬೇಕು ಎನ್ನುವ ಚರ್ಚೆಗಳು ಬಿಜೆಪಿಯಲ್ಲಿ ನಡೆದಿದ್ದು ಸಿ ಟಿ ರವಿ, ಅಶ್ವತ್ಥನಾರಾಯಣ, ಶೋಭಾ ಕರಂದ್ಲಾಜೆ ಹೆಸರುಗಳು ಕೇಳಿಬಂದಿದ್ದವು. ಅದರಲ್ಲಿ ಸಿ ಟಿ ರವಿ ಹೆಸರು ಬಹುತೇಕ ಅಂತಿಮ ಎನ್ನಲಾಗಿತ್ತು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆ ಮಾಡಿದ್ದ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗಿತ್ತು.

ಅದಕ್ಕೆ ಪೂರಕವಾಗಿ ಯಡಿಯೂರಪ್ಪ ನಿವಾಸಕ್ಕೆ ಸಿ ಟಿ ರವಿ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡು ಬಂದರು. ಆರ್​ಎಸ್​ಎಸ್​ ಕಚೇರಿ ಕೇಶವಕೃಪಾಗೆ ಭೇಟಿ ನೀಡಿ ಸಂಘ ಪರಿವಾರದ ಹಿರಿಯರ ಜೊತೆ ಮಾತುಕತೆ ನಡೆಸಿದ್ದರು. ಇದರ ನಡುವೆ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿತ್ತು. ಆದರೆ ಸಿ ಟಿ ರವಿ ದೆಹಲಿಗೆ ತೆರಳುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ರಾಜಕೀಯ ಬೆಳವಣಿಗೆ ನಡೆದಿದ್ದು, ಮಾಜಿ ಸಚಿವ ಹಾಗೂ ಭೋವಿ ಸಮುದಾಯಕ್ಕೆ ಸೇರಿರುವ ಅರವಿಂದ ಲಿಂಬಾವಳಿ ಹೆಸರು ಇದೀಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದೆ.

ಸಿ ಟಿ ರವಿ ಹೆಸರಿಗೆ ಪಕ್ಷದ ಹಿರಿಯ ನಾಯಕ ಬಿ ಎಸ್​ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚುನಾವಣೆಗೂ ಮುನ್ನ ಬಿಎಸ್​ವೈ ಕುಟುಂಬದ ವಿಚಾರದಲ್ಲಿ ಸಿ ಟಿ ರವಿ ಆಡಿದ್ದರೆನ್ನಲಾದ ಮಾತುಗಳೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಆಗಿರುವ ಬಿ ಎಲ್ ಸಂತೋಷ್ ಬೆಂಬಲ ಇದ್ದರೂ ಯಡಿಯೂರಪ್ಪ ವಿರೋಧ ಕಟ್ಟಿಕೊಂಡು ಆಯ್ಕೆ ಮಾಡುವುದು ಹೈಕಮಾಂಡ್​ಗೆ ಕಷ್ಟ ಸಾಧ್ಯ​ ಎನ್ನಲಾಗುತ್ತಿದೆ.

ಯಡಿಯೂರಪ್ಪ ಸಂಪುಟದಲ್ಲಿ ಕೆಲಸ ಮಾಡಿದ ಅನುಭವ, ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿ ಕೆಲಸ, ಸಂಘಟನಾ ಚತುರತೆ ಕಾರಣಕ್ಕೆ ಲಿಂಬಾವಳಿ ಹೆಸರು ಮುನ್ನಲೆಗೆ ಬಂದಿದೆ. ಯಡಿಯೂರಪ್ಪ ಜೊತೆ ಉತ್ತಮ ಒಡನಾಟ ಇರಿಸಿಕೊಂಡಿರುವ ಕಾರಣಕ್ಕೆ ಲಿಂಬಾವಳಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಯಡಿಯೂರಪ್ಪ ವಿರೋಧ ವ್ಯಕ್ತವಾಗುವುದಿಲ್ಲ, ಸಂಘ ಪರಿವಾರದ ಜೊತೆಗೂ ಉತ್ತಮ ಒಡನಾಟ ಇದೆ. ಅಲ್ಲದೆ ಭೋವಿ ಸಮುದಾಯಕ್ಕೆ ಸೇರಿದ ಲಿಂಬಾವಳಿಗೆ ಅವಕಾಶ ನೀಡಿದರೆ ದಲಿತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದಂತಾಗಲಿದೆ. ಇದರಿಂದ ಕಾಂಗ್ರೆಸ್​ನ ದಲಿತ ಸಿಎಂ ವಿಚಾರದಲ್ಲಿ ಮತ್ತಷ್ಟು ವಾಗ್ದಾಳಿ ನಡೆಸಲು ಅನುಕೂಲವಾಗಲಿದೆ ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.


Spread the love

About Laxminews 24x7

Check Also

ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು

Spread the love ಮಹಾಲಿಂಗಪುರ: ರೈತ ಸಮುದಾಯವು ಜಾಣತನದಿಂದ ಒಕ್ಕಲುತನ ಮಾಡಿದರೆ ಕಡಿಮೆ ಜಮೀನು, ಅಲ್ಪಾವಧಿಯಲ್ಲಿಯೇ ಲಾಭವನ್ನು ಮಾಡಿಕೊಳ್ಳಬಹುದು ಎಂಬುದನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ