Breaking News

ನಾಳೆ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್​ ನಾಯಕರ ಸಭೆ

Spread the love

ಬೆಂಗಳೂರು: ರಾಜ್ಯ ಕಾಂಗ್ರೆಸ್ ರಾಜಕೀಯ ಬುಧವಾರ ದೆಹಲಿಗೆ ಶಿಫ್ಟ್ ಆಗಲಿದೆ. ರಾಜ್ಯ ನಾಯಕರ ಜೊತೆ ಕೈ ಹೈಕಮಾಂಡ್ ಲೋಕಸಭೆ ಚುನಾವಣೆ ಕಾರ್ಯತಂತ್ರ ನಡೆಸಲಿದೆ.‌ ಅದರ ಜೊತೆಗೆ ಶಾಸಕರ ಅಸಮಾಧಾನಕ್ಕೆ ಮದ್ದು ಅರೆಯುವ ಕೆಲಸವೂ ನಡೆಯಲಿದೆ.

 

ಕೈ ಪಕ್ಷದಲ್ಲಿನ ಬೇಗುದಿ ತಣಿಸಲು ಹೈಕಮಾಂಡ್ ಎಂಟ್ರಿ ಕೊಟ್ಟಿದೆ. ಹೈಕಮಾಂಡ್ ಬುಲಾವ್ ಹಿನ್ನೆಲೆ ಬುಧವಾರ ಸಿಎಂ, ಡಿಸಿಎಂ, ಸಚಿವರು ಸೇರಿ ಪ್ರಮುಖ ನಾಯಕರೆಲ್ಲ ದೆಹಲಿ ಕಡೆ ದೌಡಾಯಿಸ್ತಿದ್ದಾರೆ. ಶಾಸಕರ ಅತೃಪ್ತಿ ಶಮನಕ್ಕೆ ಮದ್ದೆರಚಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಸರತ್ತು ನಡೆಸಲಿದ್ದಾರೆ. ಸಿಎಂ ಅಧಿಕಾರ ಹಂಚಿಕೆ, ಲೋಕಸಭೆ ಎಲೆಕ್ಷನ್, ಗ್ಯಾರಂಟಿಗಳ ಅನುಷ್ಠಾನ, ಕಾರ್ಯಾಧ್ಯಕ್ಷರ ನೇಮಕ ಸಂಬಂಧ ಗಂಭೀರ ಚರ್ಚೆ ನಡೆಯಲಿದ್ದು, ಹಿರಿಯ ನಾಯಕರಿಗೆ ಹೈಕಮಾಂಡ್ ಕೆಲವು ಟಾಸ್ಕ್ ನೀಡಲಿದೆ.

ದೆಹಲಿಯಲ್ಲಿ ಇಂದು ಎರಡು ಸಭೆಗಳು ನಡೆಯಲಿವೆ.‌ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರು ಒಂದು ಸಭೆಯನ್ನು ಹಿರಿಯ ಕೈ ಶಾಸಕರ ಜೊತೆ ನಡೆಸಿದರೆ, ಎರಡನೇ ಸಭೆಯು ಸಚಿವರ ಜೊತೆ ನಡೆಯಲಿದೆ ಎಂದು ಹೇಳಲಾಗಿದೆ. ಶಾಸಕರ ಸಭೆಯಲ್ಲಿ ವರಿಷ್ಠರು ಅವರ ಅಸಮಾಧಾನ ತಣಿಸುವ ಕೆಲಸ ಮಾಡಲಿದ್ದಾರೆ. ಶಾಸಕರು ಬರೆದ ಅಸಮಾಧಾನದ ಪತ್ರದಿಂದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿದ್ದು, ಡ್ಯಾಮೇಜ್ ಕಂಟ್ರೋಲ್ ಕೆಲಸ ಮಾಡಲಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯ ಇದ್ದು, ಯಾವುದೇ ಅಸಮಾಧಾನ, ಗೊಂದಲ ಇರಬಾರದು. ಏನೇ ಅಸಮಾಧಾನ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಿ. ಬಹಿರಂಗವಾಗಿ ಹೇಳಿಕೆ, ಪತ್ರ ಬರೆಯುವುದು ಬೇಡ ಎಂದು ಶಾಸಕರಿಗೆ ಮನವರಿಕೆ ಮಾಡಲಿದ್ದಾರೆ. ಪಂಚ ಗ್ಯಾರಂಟಿಗಳು ಹೆಚ್ಚು ಜನರ ಮನ ತಲುಪುವಲ್ಲಿ ಶ್ರಮವಹಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಇದರ ಲಾಭ ಪಡೆಯಲು ಕಾರ್ಯತಂತ್ರ ರೂಪಿಸಬೇಕು. ನಿಮ್ಮ ಯಾವುದೇ ಸಮಸ್ಯೆಗಳಿದ್ದರೆ ಸಿಎಂ ಅಥವಾ ಡಿಸಿಎಂ ಡಿಕೆಶಿ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಿ.‌ ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡಬೇಡಿ ಎಂದು ವರಿಷ್ಠರು ಸಲಹೆ ನೀಡಲಿದ್ದಾರೆ.

ದೆಹಲಿಯತ್ತ ಕೈ ನಾಯಕರ ದಂಡು: ಕಾಂಗ್ರೆಸ್ ಶಾಸಕರ ಬಂಡಾಯ ಶಮನಕ್ಕೆ ಖುದ್ದು ರಾಹುಲ್ ಗಾಂಧಿ ಎಂಟ್ರಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಕೆ ಎಚ್ ಮುನಿಯಪ್ಪ, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ,‌ ಕೆ ಜೆ ಜಾರ್ಜ್, ಕೃಷ್ಣಬೈರೇಗೌಡ, ರಾಮಲಿಂಗಾರೆಡ್ಡಿ, ಜಿ. ಪರಮೇಶ್ವರ್, ಡಿ.ಕೆ. ಸುರೇಶ್, ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ, ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ, ಬಿ ಕೆ ಹರಿಪ್ರಸಾದ್ ಸೇರಿದಂತೆ 37 ನಾಯಕರಿಗೆ ಬುಲಾವ್ ನೀಡಲಾಗಿದೆ. ಡಿಕೆ ಶಿವಕುಮಾರ್​​ ಹೇಳಿದಂತೆ ಸುಮಾರು 50 ಕೈ ನಾಯಕರು ದೆಹಲಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸುರ್ಜೇವಾಲಾ, ಕೆಸಿ ವೇಣುಗೋಪಾಲ್, ಅಭಿಷೇಕ್ ದತ್ ಸೇರಿ ಪ್ರಮುಖ ನಾಯಕರು ದಿನವಿಡೀ ಮ್ಯಾರಥಾನ್ ಮೀಟಿಂಗ್ ನಡೆಸಲಿದ್ದಾರೆ.

ಸಮನ್ವಯ ಸಮಿತಿ ರಚನೆಗೆ ಕೆಲವರಿಂದ ಮನವಿ: ಸಚಿವರು ಮತ್ತು ಶಾಸಕರ ಮಧ್ಯೆ ಸಮನ್ವಯತೆ ಸಾಧಿಸಲು ಸಮನ್ವಯತೆ ಸಮಿತಿ ರಚನೆಗೆ ಹಿರಿಯ ನಾಯಕರು ಬೇಡಿಕೆ ಇಡುವ ಸಾಧ್ಯತೆ ಇದೆ. ಅನುದಾನಕ್ಕೆ ಕತ್ತರಿ, ಸಚಿವರಿಂದ ಯಾವುದೇ ಸ್ಪಂದನೆ ಸಿಗದೇ ಇರುವುದರಿಂದ ಸಚಿವರು ಹಾಗೂ ಶಾಸಕರ ಮಧ್ಯೆ ಸಮನ್ವಯತೆ ಸಾಧಿಸಲು ಸಮನ್ವಯತೆ ಸಮಿತಿ ರಚನೆಗೆ ಕೆಲ ಶಾಸಕರು ಮನವಿ ಮಾಡುವ ಸಾಧ್ಯತೆ ಇದೆ. ಆದರೆ ಸಿಎಂ, ಡಿಸಿಎಂ ಹಾಗೂ ಸಚಿವರಿಂದ ಸಮನ್ವಯ ಸಮಿತಿ ರಚನೆಗೆ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆಯೂ ಇದೆ. ಸಮನ್ವಯ ಸಮಿತಿ ರಚನೆಯಿಂದ ಮೂರನೇ ಪವರ್ ಸೆಂಟರ್ ಸೃಷ್ಟಿಯಾಗುವ ಆತಂಕ ಇದ್ದು, ಪ್ರತಿಪಕ್ಷಗಳ ಟೀಕೆಗೆ ಗುರಿಯಾಗುವ ಸಾಧ್ಯತೆ ಇದೆ. ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದರೂ ಸಮನ್ವಯ ಸಮಿತಿ ರಚನೆಯಿಂದ ತಪ್ಪು ಸಂದೇಶ ರವಾನೆಯಾಗಲಿದೆ. ಹೀಗಾಗಿ ವರಿಷ್ಠರು ಸಮನ್ವಯ ಸಮಿತಿ ರಚನೆಗೆ ಮುಂದಾಗ್ತಾರಾ ಎಂಬ ಪ್ರಶ್ನೆ ಮೂಡಿದೆ.‌


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ