ಬೀದರ್: ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆಯ ಮೂಲಕ ಜಿಲ್ಲೆಯಲ್ಲಿ ವಿವಿಧ ಠಾಣೆಗಳಲ್ಲಿ ಮತ್ತು ಅರಣ್ಯ ಇಲಾಖೆಯಲ್ಲಿ ದಾಖಲಾದ ಶ್ರೀಗಂಧ ಮರಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 8,75,000 ರೂ. ಮೌಲ್ಯದ ವಿವಿಧ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್. ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾಲ್ಕಿ ಅಂಬೆಸಾಂಗಾವಿ ಗ್ರಾಮದ ಸೂರಜಸಿಂಗ್ ಕನ್ನುಸಿಂಗ್ ರಾಜಪೂತ ಎನ್ನುವರ ಜಮೀನಿನಲ್ಲಿ ಶ್ರೀಗಂಧ ಮರಗಳ ಕಳ್ಳತನ ಸೇರಿದಂತೆ ಎರಡು ಪ್ರಕರಣ ಹಾಗೂ ಬೀದರ್ ಜಿಲ್ಲಾ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಕಳ್ಳತನವಾದ ಮೂರು ಶ್ರೀಗಂಧ ಮರಗಳ ಕಳ್ಳತನ ಪ್ರಕರಣದಲ್ಲಿ ಈ ಆರೋಪಿಗಳು ಭಾಗಿಯಾಗಿದ್ದರು. ಬಂಧಿತರಿಂದ 5 ಲಕ್ಷ ರೂ. ಮೌಲ್ಯದ ಕಾರ್, 45,000 ರೂ. ಮೌಲ್ಯದ ಬೈಕ್ ಹಾಗೂ ಗರಗಸ, ಮೂರು ಮೊಬೈಲ್ ಸೇರಿದಂತೆ ಒಟ್ಟು 8,75,000 ರೂ. ಮೌಲ್ಯದ ವಿವಿಧ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
”ಈ ಪ್ರಕರಣದಲ್ಲಿ ಒಟ್ಟು ಒಂಭತ್ತು ಆರೋಪಿಗಳಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಆರು ಮಂದಿ ಆರೋಪಿಗಳು ತಪ್ಪಿಸಿಕೊಂಡಿದ್ದು, ಇವರ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿತರು ಶ್ರೀಗಂಧದ ಮರಗಳನ್ನು ಕಡಿದು ನೆರೆಯ ತೆಲಂಗಾಣ ರಾಜ್ಯದ ವಿಕಾರಬಾದ್ ಜಿಲ್ಲೆಯ ಓರ್ವ ವ್ಯಕ್ತಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಬೇರೆ ಪ್ರಕರಣಗಳ ಮಾಹಿತಿ ನೀಡಿದ ಎಸ್ಪಿ: ಬೀದರ್ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ನೇ ಆಗಸ್ಟ್ 6 ರಂದು ಬೀದರ್ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿಲ್ಲಿಸಿದ ದ್ವಿಚಕ್ರವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಚೆಟ್ಟನಳ್ಳಿ ಗ್ರಾಮದ ವೀರಶೆಟ್ಟಿ ಶಾಮರಾವ್ ಮುದ್ದಪ್ಪಾ ಎನ್ನುವ ಆರೋಪಿಯನ್ನು ಬಂಧಿಸಿ 45,000 ರೂ. ಮೌಲ್ಯದ ದ್ವಿಚಕ್ರ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ. ನೂತನ ನಗರ ಠಾಣೆ ವ್ಯಾಪ್ತಿಯಲ್ಲಿ 2023ನೇ ಜುಲೈ 26 ರಂದು ಬೀದರ್ ನಗರದ ಗುರುನಾನಕ ಕಾಲೋನಿಯಲ್ಲಿ ಮನೆಯ ಮುಂದಿನಿಂದ ಬ್ಯಾಟರಿ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿತರನ್ನು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಲು ಸ್ವೀಕರಿಸಿದ ಅಂಗಡಿ ಮಾಲೀಕರಿಂದ ಎಮರಾನ ಕಂಪನಿಯ ಬ್ಯಾಟರಿ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಆಟೋ ರಿಕ್ಷಾ ಸೇರಿ ಒಟ್ಟು 1,72,000 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿರುತ್ತದೆ ಎಂದರು.