ಪಾಟ್ನಾ(ಬಿಹಾರ) : “ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸೋಲುವ ಭಯದಲ್ಲಿದ್ದಾರೆ.
ಸೋತ ಬಳಿಕ ಅವರು ವಿದೇಶದಲ್ಲಿ ಹೋಗಿ ನೆಲೆಯೂರಲು ಯೋಚನೆ ಮಾಡುತ್ತಿದ್ದಾರೆ” ಎಂದು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಭಾನುವಾರ ಟೀಕಿಸಿದರು.
ಕೆಲವು ದಿನಗಳ ಹಿಂದೆ ಮೋದಿ ಮಾಡಿದ್ದ ‘ಕ್ವಿಟ್ ಇಂಡಿಯಾ’ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಭಾರತ ತೊರೆಯಲು ಯೋಜಿಸುತ್ತಿರುವುದು ಪ್ರಧಾನಿ ಮೋದಿ. ಇದೇ ಕಾರಣಕ್ಕಾಗಿಯೇ ಅವರು ಪದೇ ಪದೇ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ತಾವು ಎಲ್ಲಿ ಆರಾಮವಾಗಿ ಕಾಲೂರಬಹುದು, ತಮ್ಮ ಇಷ್ಟದ ಪಿಜ್ಜಾ, ಮೊಮೋಸ್ ಹಾಗೂ ಚೌ ಮೇನ್ ಅನ್ನು ಎಲ್ಲಿ ಆನಂದವಾಗಿ ಸವಿಯಬಹುದು ಎಂಬುದಕ್ಕೆ ಸೂಕ್ತವಾದ ಸ್ಥಳ ಹುಡುಕುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಮೈತ್ರಿ ವಿಪಕ್ಷಗಳು ಸೇರಿ ತಮ್ಮ ಮಹಾಮೈತ್ರಿ ಒಕ್ಕೂಟಕ್ಕೆ ‘ಇಂಡಿಯಾ’ ಎಂದು ಹೊಸ ನಾಮಕರಣ ಮಾಡಿದ್ದರ ಹಾಗೂ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ ಕುರಿತು ಕೆಲ ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ಮೋದಿ, ಹೊಸ ಒಕ್ಕೂಟ ‘ಇಂಡಿಯಾ’ವನ್ನು ರಚಿಸಿರುವ ವಿರೋಧ ಪಕ್ಷಗಳು ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದ ರಾಜಕೀಯ ಮಾಡುತ್ತಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಈಸ್ಟ್ ಇಂಡಿಯಾ ಕಂಪನಿಯನ್ನು ವಿದೇಶಿಗರು ಸ್ಥಾಪಿಸಿದ ಸಂಸ್ಥೆಗಳು ಎಂದು ಹೋಲಿಕೆ ಮಾಡಿ ಹೇಳಿದ್ದರು. ಕೆಲವು ನಿಷೇಧಿತ ಸಂಸ್ಥೆಗಳಿಗೆ ‘ಇಂಡಿಯಾ’ ಎಂದು ದೇಶದ ಹೆಸರನ್ನು ಬಳಸುವುದನ್ನು ಒಂದು ಫ್ಯಾಶನ್ ಆಗಿದೆ ಎಂದಿದ್ದರು.