ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ನಿತ್ಯ ಸುರಿಯುತ್ತಿರುವ ಮಳೆ ಅಬ್ಬರಕ್ಕೆ ನಗರದ ಬಹುತೇಕ ಬಹುತೇಕ ಸರ್ಕಾರಿ ಸ್ವಾಮ್ಯದ ಕಟ್ಟಡಗಳು ಸೋರುತ್ತಿವೆ. ಹುಬ್ಬಳ್ಳಿಯ ಕೇಂದ್ರಿಯ ಬಸ್ ನಿಲ್ದಾಣ ಕೂಡ ಇದರಿಂದ ಹೊರತಾಗಿಲ್ಲ.
ಹುಬ್ಬಳ್ಳಿಯಿಂದ ಬೆಂಗಳೂರು, ವಿಜಯಪುರ,ಬಳ್ಳಾರಿ, ಚೆನೈ, ಹೈದರಬಾದ್,ಮುಂಬೈ, ಪುಣೆ, ಶಿರಡಿ ಸಾಂಗಲಿ ಮೀರಜ್ ಸೇರಿ ಹಲವಾರು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರೀಯ ಹೊಸ ಬಸ್ ನಿಲ್ದಾಣದ ಕಟ್ಟಡ ಚಾವಣಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಸಿಬ್ಬಂದಿ ವಿಶ್ರಾಂತಿ ಗೃಹದ ಗೋಡೆಗಳು ಮಳೆಗೆ ತೇವವಾಗಿದ್ದು, ನೆಮ್ಮದಿಯ ನಿದ್ದೆಗೂ ಪ್ರಯಾಣಿಕರು ಪರದಾಡುವಂತಾಗಿದೆ.
ಶಿಥಿಲಗೊಂಡ ಚಾವಣಿಯಿಂದ ಮಳೆ ನೀರು ಸೋರುತ್ತಿದ್ದು, ಕೆಲ ಪ್ರಯಾಣಿಕರು ಕೊಡೆಗಳನ್ನು ಹಿಡಿದು ಆಸನದಲ್ಲಿ ಕೂರುವ ಸ್ಥಿತಿ ಇದೆ. ಚಾವಣಿ ಮೇಲೆ ನೀರು ನಿಂತು ಪುಟ್ಟ ಕೆರೆಯಂತಾಗಿ ನಿರಂತರ ಹನಿ ಹನಿ ತೊಟ್ಟಿಕ್ಕುತ್ತಿದೆ. ನಿಲ್ದಾಣದಲ್ಲಿನ 15 ಪ್ಲಾಟ್‌ಫಾರ್ಮ್‌ಗಳು ಸೋರುತ್ತಿವೆ. 12ನೇ ಪ್ಲಾಟ್‌ಫಾರ್ಮ್ ಸಂಪೂರ್ಣ ಜಲಾವೃತವಾಗಿದೆ.
bus stand is leaking rain water
ಕೇಂದ್ರೀಯ ಹೊಸ ಬಸ್‌ನಿಲ್ದಾಣದ ಚಾವಣಿ ಸೋರುತ್ತಿರುವದರಿಂದ ಪ್ರಯಾಣಿಕರು ಧರಿಸಿರುವ ಡ್ರೆಸ್ಗಳು ಒದ್ದೆಗೊಂಡು ತಂಪಾದ ಗಾಳಿಗೆ ನಡುಗವಂತಾಗಿದೆ. ವಯಸ್ಸಾದವರಂತೂ ಬಸ್ ನಿಲ್ದಾಣ ಚಾವಣಿ ಸೋರುತ್ತಿರುವ ನೀರಿನ ಹನಿ, ಬೀಸುತ್ತಿರುವ ಗಾಳಿಗೆ ಒಂದೇ ಕಡೆ ಕೂರಲು ಆಗದೇ ಅತ್ತೊಮ್ಮೆ- ಇತ್ತೊಮ್ಮೆ ತಿರುಗಾಡಿ ಟೈಮ್ ಪಾಸ್ ಮಾಡುತ್ತಿದ್ದಾರೆ.
ಅಂಗಡಿ ಮಳಿಗೆ, ಹೊಟೇಲ್ನಲ್ಲೂ ಪಜೀತಿ : ಪ್ರವೇಶ ದ್ವಾರದ ಬಲಭಾಗದಲ್ಲಿ ಟೆಂಡರ್ ಪಡೆದಿರುವ ಎರಡು ಅಂಗಡಿಗಳಿದ್ದು, ಸೋರುವ ಮಳೆನೀರಿನಿಂದ ರಕ್ಷಿಸಿಕೊಳ್ಳಲು, ಮುಂಭಾಗಕ್ಕೆ ಚಾವಣಿ ಹಾಕಿಕೊಂಡಿದ್ದಾರೆ. ಪ್ರಯಾಣಿಕರು ಅಂಗಡಿ ,ಹೊಟೇಲ್ಗೆ ಹೋಗಿ ಸ್ವಲ್ಪ ಹೊತ್ತಾದರೂ ಕುಳಿತು ಏನಾದರೂ ತಿನ್ನಬೇಕು ಎಂದರೂ, ಅಲ್ಲಿಯೂ ಕಟ್ಟಡ ತೇವಾಂಶಗೊಂಡು ಸೋರುತ್ತಿವೆ. ಬಸ್ ನಿಲ್ದಾಣ ಚಾವಣಿ ಸೋರಿಕೆಯಿಂದ ಪ್ರಯಾಣಿಕರು ಪಜೀತಿಗೆ ಒಳಗಾಗಿ, ಸರ್ಕಾರದ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದರು.