Breaking News

ಬೆಳಗಾವಿ ಹಿಂಡಲಗಾ ಜೈಲು.. ರಾಜ್ಯದಲ್ಲಿ ಕೈದಿಗಳನ್ನು ನೇಣಿಗೇರಿಸುವ ಏಕೈಕ ಕಾರಾಗೃಹವಿದು..!

Spread the love

ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಡಲು 1923ರಲ್ಲಿ ಬ್ರಿಟಿಷರಿಂದ ಸ್ಥಾಪಿತವಾದ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹವು ಶತಮಾ‌ನದ ಸಂಭ್ರಮದಲ್ಲಿದೆ. ದೇಶದ ಎರಡನೇ ಅತೀ ದೊಡ್ಡ ಜೈಲು ಮತ್ತು ಕೈದಿಗಳನ್ನು ಗಲ್ಲಿಗೇರಿಸುವ ರಾಜ್ಯದ ಏಕೈಕ ಕಾರಾಗೃಹ ಎಂಬ ಹೆಗ್ಗಳಿಕೆ ಹಿಂಡಲಗಾ ಜೈಲಿನದ್ದು. ಹೀಗೆ ಹಲವು ವಿಶೇಷತೆಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ.

ಹೌದು.. ಬೆಳಗಾವಿಯಿಂದ ಕೇವಲ 6 ಕಿ ಮೀಟರ್ ದೂರದ ಹಿಂಡಲಗಾ ಎಂಬ ಗ್ರಾಮದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಕಾರಾಗೃಹ ನಿರ್ಮಿಸಲಾಗಿದೆ. 24 ಎಕರೆ ಜಾಗದಲ್ಲಿ ಕಾರಾಗೃಹ ಕಟ್ಟಡ ಆವರಿಸಿದ್ದು, ಇನ್ನುಳಿದ 76 ಎಕರೆಯಲ್ಲಿ ಕಬ್ಬು, ಭತ್ತ ಸೇರಿ ಇಲ್ಲಿನ ಜಾನುವಾರುಗಳಿಗೆ ಮೇವು ಬೆಳೆಯಲಾಗುತ್ತಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಈ ಜೈಲಿನ ವಿವಿಧ ವಿಭಾಗಗಳ ನಡುವೆ ಬೆಳೆದು ನಿಂತಿರುವ ಮರಗಳು ಮತ್ತು ವಿವಿಧ ಸಸ್ಯವರ್ಗ ಎಲ್ಲರನ್ನು ಆಕರ್ಷಿಸುತ್ತದೆ. ಹಸಿರು ಸಂಪತ್ತಿನ ಸಂರಕ್ಷಣೆಯಲ್ಲೂ ಸಿಬ್ಬಂದಿ ಮತ್ತು ಕೈದಿಗಳ ಪಾತ್ರ ಪ್ರಮುಖವಾಗಿದೆ. 80 ಆಕಳುಗಳು ಇಲ್ಲಿದ್ದು, ಕೈದಿಗಳು ಅವುಗಳ ಪಾಲಕರಾಗಿದ್ದಾರೆ.

1,162 ಕೈದಿಗಳನ್ನು ಇರಿಸುವ ಸಾಮರ್ಥ್ಯ:ಎರಡು ದೊಡ್ಡ ಸಂಕೀರ್ಣಗಳನ್ನು ಜೈಲು ಒಳಗೊಂಡಿದೆ. ಒಂದು ಸಂಕೀರ್ಣದಲ್ಲಿ ಪುರುಷ ಅಪರಾಧಿಗಳಿಗೆ ಬ್ಯಾರಕ್‌ಗಳನ್ನು ಅಳವಡಿಸಲಾಗಿದೆ. ವಿಚಾರಣಾಧೀನ ಕೈದಿಗಳಿಗೆ ಇನ್ನೊಂದು ಸಂಕೀರ್ಣ ಬಳಸಲಾಗುತ್ತಿದೆ. ಅಪರಾಧಿಗಳಿಗೆ ದಿನ ನಿತ್ಯ ನೇಕಾರಿಕೆ, ಬೇಕರಿ ತಯಾರಿಕೆ ಮತ್ತು ಟೈಲರಿಂಗ್ ಕೆಲಸದ ಸೌಲಭ್ಯವಿದೆ. ಅಂಡರ್ ಟ್ರಯಲ್ ವಿಭಾಗದಲ್ಲಿ ಸೆಲ್‌ಗಳು ಮತ್ತು ಬ್ಯಾರಕ್‌ಗಳಿವೆ. ಇಲ್ಲಿ ಗ್ರಂಥಾಲಯ, ಮರಗೆಲಸ ವಿಭಾಗ, ಟೈಲರಿಂಗ್ ಇದೆ. ಹೆಚ್ಚಿನ ಭದ್ರತೆ ಇರುವ ಕೈದಿಗಳಿಗಾಗಿ ಕೆಲವು ವಿಶೇಷ ಕೋಣೆಗಳು ಸಹ ಇವೆ.

ಈ ಜೈಲಿನಲ್ಲಿ 1,162 ಕೈದಿಗಳನ್ನು ಇರಿಸುವ ಸಾಮರ್ಥ್ಯವಿದೆ. 935 ಕೈದಿಗಳು ಸದ್ಯ ಬಂಧಿಯಾಗಿದ್ದಾರೆ. ಅದರಲ್ಲಿ 897 ಪುರುಷ ಮತ್ತು 38 ಮಹಿಳಾ ಕೈದಿಗಳಿದ್ದಾರೆ. ಕೈದಿಗಳಿಗೆ ಧ್ಯಾನ ಮಂದಿರವಿದೆ. ಬಾಲ ಅಪರಾಧಿಗಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ್ದೇವೆ. ಅಲ್ಲದೇ ಕೈದಿಗಳ ಮನಪರಿವರ್ತನೆಗಾಗಿ ಆಗಾಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಪರಾಧಿಗಳು ಮುಕ್ತರಾಗಿ ಜೈಲಿನಿಂದ ಹೊರಗಡೆ ಹೋದ ಬಳಿಕ ಒಳ್ಳೆಯ ನಾಗರಿಕರಾಗಿ ಬದುಕುವಂತೆ ಪ್ರೇರೇಪಿಸುತ್ತಿದ್ದೇವೆ ಎಂದು ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ ತಿಳಿಸಿದ್ದಾರೆ.

 ಬೆಳಗಾವಿ ಹಿಂಡಲಗಾ ಜೈಲು

ಗಲ್ಲಿಗೇರಿಸುವ ಏಕೈಕ ಕಾರಾಗೃಹ, 41 ಕೈದಿ ಇಲ್ಲಿ ನೇಣಿಗೆ: ಜೈಲು ಅಧಿಕಾರಿಗಳ ಪ್ರಕಾರ ಸದ್ಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸುಮಾರು 27 ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಕೈದಿಗಳಿದ್ದಾರೆ. ಹಿಂದಿನಿಂದಲೂ ಕರ್ನಾಟಕದಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಗಳನ್ನು ಹಿಂಡಲಗಾದಲ್ಲಿ ಇರಿಸಲಾಗುತ್ತದೆ. ಮುಖ್ಯವಾಗಿ ಗಲ್ಲು ಶಿಕ್ಷೆ ವಿಧಿಸುವ ರಾಜ್ಯದ ಏಕೈಕ ಜೈಲು ಎಂಬ ಖ್ಯಾತಿಗೆ ಬೆಳಗಾವಿ ಹಿಂಡಲಗಾ ಕಾರಾಗೃಹ ಪಾತ್ರವಾಗಿದ್ದು,‌ ಈ ವರೆಗೆ 41 ಕೈದಿಗಳನ್ನು ಇಲ್ಲಿ ನೇಣಿಗೇರಿಸಲಾಗಿದೆ. ಇಲ್ಲಿ ಮೂರು ಸ್ಥಳಗಳಲ್ಲಿ ಗಲ್ಲುಶಿಕ್ಷೆ ವಿಧಿಸಬಹುದಾಗಿದೆ.

ಜೈಲಿನಲ್ಲಿ ಗಲ್ಲಿಗೇರಿದ ಕೊನೆಯ ವ್ಯಕ್ತಿ ಗೋಕಾಕ್‌ನ ಹನುಮಪ್ಪ ಮರಿಯಾಲ ನವೆಂಬರ್ 9, 1983. ಅದಕ್ಕೂ ಮೊದಲು, ಆರು ಜನರನ್ನು 1976 ರಲ್ಲಿ ಮತ್ತು ಐವರನ್ನು 1978 ರಲ್ಲಿ ಗಲ್ಲಿಗೇರಿಸಲಾಯಿತು. ಹಿಂಡಲಗಾ ಜೈಲಿನಲ್ಲಿ ನಾಲ್ವರು ವೀರಪ್ಪನ್ ಗ್ಯಾಂಗ್ ಸದಸ್ಯರು ಸೇರಿದಂತೆ ಮರಣದಂಡನೆ ಶಿಕ್ಷೆಗೆ ಒಳಗಾದ ಹಲವಾರು ಅಪರಾಧಿಗಳು ಇದ್ದಾರೆ. ಸರಣಿ ಅತ್ಯಾಚಾರಿ ಮತ್ತು ಹಂತಕ ಉಮೇಶ್ ರೆಡ್ಡಿ ಸೇರಿದಂತೆ ಕುಖ್ಯಾತ ರೌಡಿಗಳು ಮತ್ತು ಶಂಕಿತ ಸಿಮಿ ಕಾರ್ಯಕರ್ತರು, ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ್ದ ಜಯೇಶ್ ಪೂಜಾರಿ ಸಹ ಈ ಜೈಲಿನಲ್ಲಿದ್ದಾರೆ


Spread the love

About Laxminews 24x7

Check Also

ಸುವರ್ಣಸೌಧದಲ್ಲಿ ಬಾಪೂಜಿ ಜೀವನ ಚರಿತ್ರೆಯ ಅಪರೂಪದ ಫೋಟೋಗಳ ಪ್ರದರ್ಶನ

Spread the loveಬೆಳಗಾವಿ: ಕುಂದಾನಗರಿ ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ