ಧಾರವಾಡ: ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಕಳೆದ ಮೂರು ದಿನದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಜಿಲ್ಲೆಯ ಅಳ್ನಾವರ ತಾಲೂಕಿನ ಕಂಬಾರಗಣವಿ ಗ್ರಾಮದ ಸೇತುವೆ ಜಲಾವೃತಗೊಂಡಿದೆ.
ಮನೆಗಳಿಗೆ ವಾಪಸ್ ಆಗಲು ಶಾಲಾ ಮಕ್ಕಳು ಪರದಾಟ ನಡೆಸಬೇಕಾಯಿತು. ಟ್ರ್ಯಾಕ್ಟರ್ ಮತ್ತು ಜೆಸಿಬಿ ಮೂಲಕ ಮಕ್ಕಳು ಹಳ್ಳ ದಾಟಿದ್ದಾರೆ. ಕಂಬಾಗರಣವಿ ಗ್ರಾಮದ ಹೊರವಲಯದಲ್ಲಿರುವ ಹಳ್ಳದ ಸೇತುವೆ ನಿರಂತರ ಮಳೆಯಿಂದ ಜಲಾವೃತಗೊಂಡ ಹಿನ್ನೆಲೆಯಲ್ಲಿ ಸೇತುವೆ ಒಂದು ಬದಿಗೆ ಬಸ್ ಮಕ್ಕಳನ್ನು ಬಿಟ್ಟು ಹೋಗಿದೆ.
ಹೀಗಾಗಿ ಮಕ್ಕಳನ್ನು ಟ್ರ್ಯಾಕ್ಟರ್ ಮತ್ತು ಜೆಸಿಬಿ ಮೂಲಕ ರಕ್ಷಣೆ ಮಾಡಲಾಗಿದೆ. ಮಕ್ಕಳನ್ನು ಸುರಕ್ಷಿತವಾಗಿ ಗ್ರಾಮಸ್ಥರು ಹಳ್ಳ ದಾಟಿಸಿಕೊಂಡಿದ್ದಾರೆ. ಸದ್ಯ ಕಂಬಾರಗಣವಿ ಗ್ರಾಮಸ್ಥರು ಸಂಪರ್ಕ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮಳೆ ಅಬ್ಬರ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಕಂಬಾರಗಣವಿಯ ಹಳ್ಳದ ಪ್ರವಾಹಕ್ಕೆ ಸಿಲುಕಿದ್ದ ಯುವಕನ ರಕ್ಷಣೆ ಮಾಡಲಾಗಿದೆ. ಸಂಪೂರ್ಣ ಜಲಾವೃತಗೊಂಡಿದ್ದ ಹಳ್ಳದ ಸೇತುವೆಯನ್ನು ದಾಟಲು ಮುಂದಾಗಿದ್ದ ಯುವಕ ಈ ವೇಳೆ ಬೈಕ್ ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ, ಈ ವೇಳೆ ಸ್ಥಳೀಯರು ಯುವಕನನ್ನು ಎಳೆದು ತಂದು ರಕ್ಷಣೆ ಮಾಡಿದ್ದಾರೆ.
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಬೆಚ್ಚಿದ ಜನರು: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಬಿಡದೇ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಹೊಡೆತಕ್ಕೆ ಬಿ.ಆರ್.ಟಿ.ಎಸ್ ಕಾರಿಡಾರ್ ಜಲಾವೃತಗೊಂಡಿವೆ. ಹುಬ್ಬಳ್ಳಿ- ಧಾರವಾಡ ಅವಳಿನಗರದ ಮಧ್ಯದಲ್ಲಿನ ನವನಗರ, ಅಮರಗೋಳ, ಕೆಎಂಎಫ್ ಸೇರಿದಂತೆ ಅವಳಿನಗರದ ಮಧ್ಯದಲ್ಲಿನ ಬಿ.ಆರ್.ಟಿ.ಎಸ್ ಕಾರಿಡಾರ್ ಸಂಪೂರ್ಣ ಜಲಾವೃತಗೊಂಡಿವೆ. ಜನರು ಬಿ.ಆರ್.ಟಿ.ಎಸ್ ಯೋಜನೆ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ. ಅವೈಜ್ಞಾನಿಕ ಕಾರಿಡಾರ್ ನಿರ್ಮಿಸಿದ್ದು, ನೀರು ಸಮರ್ಪಕವಾಗಿ ಹರಿದು ಹೋಗಲು ಆಗದೇ ಇರುವ ಕಾರಣ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಶಾಲೆಯ ಮೈದಾನ ಸಂಪೂರ್ಣ ಜಲಾವೃತ: ಮತ್ತೊಂದೆಡೆ ಜಿಲ್ಲೆಯಲ್ಲಿ ಸತತವಾಗಿ ಸುರಿಯುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಶಾಲೆಯ ಆವರಣಗಳು ಜಲಾವೃತಗೊಂಡಿದ್ದು, ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿಯೇ ಶಾಲೆಗೆ ತೆರಳುವಂತಾಗಿದೆ. ಹುಬ್ಬಳ್ಳಿ ತಾಲೂಕಿನ ಹೆಬಸೂರಿನ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿ ಇಂತಹದೊಂದು ಅವ್ಯವಸ್ಥೆ ತಲೆದೋರಿದ್ದು, ಸ್ವಲ್ಪ ಪ್ರಮಾಣದ ಮಳೆಯಾದರೂ ಈ ಶಾಲೆಯ ಮೈದಾನ ಕೆಸರು ಗದ್ದೆಯಾಗುತ್ತದೆ. ಅಲ್ಲದೇ ಸಂಪೂರ್ಣ ಜಲಾವೃತಗೊಂಡು ಮಕ್ಕಳು ಇದರಲ್ಲಿಯೇ ಓಡಾಡುವಂತಾಗಿದೆ.
ಇನ್ನು ಧಾರವಾಡ ಜಿಲ್ಲೆಯ ಬಹುತೇಕ ಶಾಲೆಯಲ್ಲಿ ಇಂತಹ ಅವ್ಯವಸ್ಥೆ ತಲೆದೂರಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಜರುಗಿಸಿ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಿದೆ.