ಬಳ್ಳಾರಿ: ಕಳೆದ ರಾತ್ರಿ ಬಳ್ಳಾರಿ ಹೊರವಲಯದ ಗುಗ್ಗರಹಟ್ಟಿಯ ಕೃಷ್ಣಾ ಕಾಲೋನಿಯಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಕೆಆರ್ಪಿಪಿ ಕಾರ್ಯಕರ್ತನಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೆಹಬೂಬ್ ಬಾಷಾರನ್ನ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಘಟನೆ ಸದನದಲ್ಲೂ ಚರ್ಚೆಗೆ ಕಾರಣವಾಗಿದೆ.
ಬಳ್ಳಾರಿ ನಿವಾಸಿ ಮೆಹಬೂಬ್ ಬಾಷಾ ಅವರು ಗಾಲಿ ಜನಾರ್ದನ ರೆಡ್ಡಿಯವರ ನೂತನ ಕೆಆರ್ಪಿಪಿ ಪಕ್ಷದ ಕಾರ್ಯಕರ್ತರಾಗಿದ್ದರು. ಮೆಹಬೂಬ್ ಬಾಷಾ ಮಗನ ಹುಟ್ಟುಹಬ್ಬದ ಹಿನ್ನೆಲೆ ಕೇಕ್ ತೆಗೆದುಕೊಂಡು ಮನೆಗೆ ಬಂದಿದ್ದರು. ಈ ವೇಳೆ ಬೈಕ್ನಲ್ಲಿ ಆಗಮಿಸಿದ್ದ ಮೂವರು ದುಷ್ಕರ್ಮಿಗಳು ಮೆಹಬೂಬ್ ಬಾಷಾರನ್ನು ಹೊರಗೆ ಕರೆದಿದ್ದಾರೆ. ಬಳಿಕ ತಾವು ತಂದಿದ್ದ ಚಾಕು ಮತ್ತು ಮಚ್ಚುಗಳಿಂದ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು.
ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಮೆಹಬೂಬ್ ಬಾಷಾರನ್ನ ಸಂಬಂಧಿಕರು ಮತ್ತು ಸ್ಥಳೀಯರು ತಕ್ಷಣ ವಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದರು. ಆದ್ರೂ ಚಿಕಿತ್ಸೆ ಫಲಕಾರಿಯಾಗದೇ ಮೆಹಬೂಬ್ ಬಾಷಾ ಸಾವನ್ನಪ್ಪಿದ್ದರು. ಮೃತ ಮೆಹಬೂಬ್ ಬಾಷಾ ಅವರು ಕಳೆದ ಚುನಾವಣೆಯಲ್ಲಿ ಕೆಆರ್ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ ಪರವಾಗಿ ಪ್ರಚಾರ ಮಾಡಿದ್ದರು.
ಮೆಹಬೂಬ್ ಬಾಷಾರನ್ನ ಕಾಂಗ್ರೆಸ್ ಕಾರ್ಯಕರ್ತರಾದ ಕಾಂಗ್ರೆಸ್ ಮುಖಂಡ ಕೋಳಿ ಅನ್ವರ್, ಅಲ್ತಾಪ್, ಸಿರಾಜ್ ಸೇರಿ ಹತ್ಯೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆರೋಪಿಗಳ ವಿಚಾರಣೆ ವೇಳೆ ಮೆಹಬೂಬ್ ಬಾಷಾರನ್ನ ಕಾಂಗ್ರೆಸ್ ಕಾರ್ಯಕರ್ತರಾದ ಕೋಳಿ ಅನ್ವರ್, ಅಲ್ತಾಪ್, ಸಿರಾಜ್ ಸೇರಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.