ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ತಾಲೀಮು ಆರಂಭಿಸಿವೆ.
ಈಗಾಗಲೇ 65 ಪಕ್ಷಗಳು ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಒಕ್ಕೂಟವನ್ನು ಸೇರುವ ಮೂಲಕ ಚುನಾವಣಾ ಅಖಾಡಕ್ಕೆ ಸಜ್ಜುಗೊಳ್ಳುತ್ತಿವೆ. ಆದರೆ, ಸಂಸತ್ತಿನಲ್ಲಿ ಒಟ್ಟು 91 ಸದಸ್ಯರನ್ನು ಹೊಂದಿರುವ ಕನಿಷ್ಠ 11 ಪಕ್ಷಗಳು ತಟಸ್ಥ ಸ್ಥಿತಿಗೆ ಜಾರಿವೆ. ಇದರಲ್ಲಿ ಮೂರು ಪಕ್ಷಗಳು ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಒಡಿಶಾದಂತಹ ಮೂರು ದೊಡ್ಡ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಒಟ್ಟಾಗಿ 63 ಸದಸ್ಯರನ್ನು ಲೋಕಸಭೆಗೆ ಕಳುಹಿಸುತ್ತವೆ.
2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಎದುರಿಸಲು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಒಗ್ಗೂಡುವ ಪ್ರಯತ್ನದಲ್ಲಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ 39 ಪಕ್ಷಗಳು ಇವೆ. ಇದರ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ ನೇತೃತ್ವದ ಹೊಸ ಮೈತ್ರಿಕೂಟದಲ್ಲಿ 25 ಪಕ್ಷಗಳು ಇವೆ. ಮಂಗಳವಾರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಮೈತ್ರಿಕೂಟ ಇಂಡಿಯಾ (Indian National Developmental Inclusive Alliance – INDIA) ಎಂಬ ಹೆಸರಲ್ಲಿ ರೂಪಗೊಂಡಿದೆ.