ಬೆಂಗಳೂರು: ಒಂದು ವಾರ ಬಿಡುವು ನೀಡಿದ್ದ ವರುಣ ದೇವ ಮುಂದಿನ ಐದು ದಿನ ಮತ್ತೆ ಅಬ್ಬರಿಸಲಿದ್ದಾನೆ. ಈಶಾನ್ಯ ಮಾರುತಗಳು ದಕ್ಷಿಣ ಭಾರತವನ್ನ ಬುಧವಾರ ಪ್ರವೇಶಿಸಿದ್ದು, ತಮಿಳುನಾಡಿನ ಚೆನ್ನೈ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ.
ಇತ್ತ ಕರ್ನಾಟಕದ ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ನವೆಂಬರ್ 2 ರವರೆಗೆ ಮಳೆಯಾಗುವ ಸಾಧ್ಯತೆಗಳಿವೆ. ಅಕ್ಟೋಬರ್ 31, ನವೆಂಬರ್ 1 ಮತ್ತು 2 ರಂದು ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕರಾವಳಿ ಭಾಗ, ಬೆಳಗಾವಿ, ಗದಗ, ವಿಜಯಪುರ, ರಾಯಚೂರು, ಹಾವೇರಿ, ಸೇರಿದಂತೆ ಹಲವೆಡೆ ಹಚ್ಚಿನ ಪ್ರಮಾಣದ ಮಳೆಯಾಗಲಿದೆ. ನಾಳೆಯಿಂದ ನವಂಬರ್ 2 ರವರೆಗೆ ಬೆಂಗಳೂರಿನಲ್ಲೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯ ಜಂಟಿ ನಿರ್ದೇಶಕ ವಿಜ್ಞಾನಿ ಸಿ.ಎಸ್.ಪಾಟೀಲ್ ಹೇಳಿದ್ದಾರೆ.ಪ್ರತಿ ವರ್ಷದಂತೆ ಈ ಬಾರಿಯೂ ಸಾಧಾರಣ ಚಳಿ ಇರಲಿದೆ. ರಾಜ್ಯದಲ್ಲಿ ಚಳಿಗಾಲದ ಕನಿಷ್ಠ ಉಷ್ಣಾಂಶ ಕಳೆದ ಬಾರಿಯಂತೆಯೇ ಇರಲಿದ್ದು, ಕೆಲವು ಕಡೆ ಹೆಚ್ಚಿನ ಚಳಿ ಇರಲಿದೆ. ಬೆಂಗಳೂರಿನಲ್ಲಿ 12 ರಿಂದ 14 ಡಿಗ್ರಿ ಉಷ್ಣಾಂಶ ಇರಲಿದೆ. ಕನಿಷ್ಠ ಉಷ್ಣಾಂಶ ಸ್ಥಳದಿಂದ ಸ್ಥಳಕ್ಕೆ ಬದಲಾವಣೆ ಆಗಲಿದೆ. ಬೀದರ್, ಕಲಬುರಗಿ, ವಿಜಯಪುರದಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿಗಿಂತ ಕಡಿಮೆ ಆಗಲಿದೆ. ಜೊತೆಗೆ ಬಾಗಲಕೋಟೆ, ರಾಯಚೂರು ಗದಗ ಸೇರಿದಂತೆ ಉತ್ತರ ಒಳನಾಡಿನಲ್ಲಿ ಚಳಿಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.