ಬೆಳಗಾವಿ: ಕಳೆದ ಮೇ 31ರಂದು ಖಾನಾಪುರ ಪಟ್ಟಣದ ಹೊರವಲಯದ ಮಲಪ್ರಭಾ ನದಿ ತೀರದಲ್ಲಿ ಪತ್ತೆಯಾದ ಅಪರಿಚಿತ ಯುವಕನ ಅಸಹಜ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವತಃ ತಂದೆಯೇ ತನ್ನ ಮಾನಸಿಕ ಅಸ್ವಸ್ಥ ಮಗನನ್ನು ಕೊಲೆ ಮಾಡಿರುವ ಸಂಗತಿ ಪೊಲೀಸರ ತನಿಖೆಯಿಂದ ಬಯಲಾಗಿದ್ದು, ಆರೋಪಿ ತಂದೆಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಅಪರಿಚಿತ ಶವದ ಮರಣೋತ್ತರ ತನಿಖೆ ನಡೆಸಿದ್ದ ಪೊಲೀಸರಿಗೆ ಮೃತ ವ್ಯಕ್ತಿ ವಿಷ ಸೇವಿಸಿರುವುದು ಮತ್ತು ಆತನ ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವ ಸಂಗತಿ ತಿಳಿದು ಬಂದಿತ್ತು. ಹಾಗಾಗಿ ಪೊಲೀಸರು ಈ ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು. ಪ್ರಕರಣ ದಾಖಲಾಗಿ ಕೆಲದಿನಗಳ ಬಳಿಕ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ಆತ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದ ನಿವಾಸಿ ನಿಖಿಲ್ ರಾಜಕುಮಾರ ಮಗದುಮ್ಮ (24) ಎಂಬುದು ದೃಢವಾಗಿತ್ತು. ನಿಖಿಲ್ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಜುಲೈ 7ರಂದು ಆತನ ಚಿಕ್ಕಪ್ಪ ಸಂತೋಷ್ ಮಗದುಮ್ಮ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ, ಅವರು ತಮ್ಮ ಅಣ್ಣ ರಾಜಕುಮಾರ್ ಶಂಕರ ಮಗದುಮ್ಮ (45) ನಿಖಿಲ್ ಕೊಲೆ ಮಾಡಿರುವುದಾಗಿ ತಿಳಿಸಿ ರಾಜಕುಮಾರ್ ವಿರುದ್ಧ ದೂರು ಕೂಡ ನೀಡಿದ್ದರು.