ಬೆಂಗಳೂರು: ರಾಜಧಾನಿ ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗಿ ಪರಿವರ್ತನೆಯಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಬೆಂಗಳೂರಿನ ಕಾನೂನು ಸುವ್ಯವಸ್ಥೆ ಅಪರಾಧ ನಿಯಂತ್ರಣ ಕೈ ತಪ್ತಿದೆ. ದಿನನಿತ್ಯ ಕೊಲೆ ಸುಲಿಗೆ ಸಾಮಾನ್ಯವಾಗುತ್ತಿದೆ ಎಂದು ದೂರಿದರು.
ಉಗ್ರರನ್ನು ಬಂಧಿಸಿದ ಸಿಸಿಬಿಗೆ ಅಭಿನಂದನೆ ಸಲ್ಲುಸುತ್ತೇನೆ. ಆದರೆ ಬಹಳಷ್ಟು ಕೇಸ್ಗಳು ಪೊಲೀಸ್ ಠಾಣೆಯಲ್ಲಿ ರಿಜಿಸ್ಟರ್ ಆಗುತ್ತಿಲ್ಲ. ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ಮಾಡುವುದು ಪೊಲೀಸರ ಕೆಲಸ. ಈ ಸರ್ಕಾರ ಬಂದ ಮೇಲೆ ಮಧ್ಯವರ್ತಿಗಳು ಕೈಹಾಕಿ ನಿಯಂತ್ರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಬೆಂಗಳೂರಿನಲ್ಲಿ ಕ್ಲಬ್ ಚಟುವಟಿಕೆಗಳು ಹೆಚ್ಚಾಗಿವೆ. ಹಫ್ತಾ ವಸೂಲಿ ತೀವ್ರವಾಗುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ಇಲ್ಲಿಯೇ ನೆಲೆಸಿ ಕ್ರಿಮಿನಲ್ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುವಂತಹ ಕೆಲಸವಾಗುತ್ತಿದೆ. ಅಂತಾರಾಷ್ಟ್ರೀಯ ಐಎಸ್ಐ ತಂಡ ಇವರ ಸಂಪರ್ಕದಲ್ಲಿದ್ದಾರೆ. ಸಿಸಿಬಿ ಅಧಿಕಾರಿಗಳು ಬಹಿರಂಗಪಡಿಸಿ, ಇದರ ಆಳ ಮತ್ತು ಉದ್ದ ದೊಡ್ಡದಿದೆ. ಇದಕ್ಕೆಲ್ಲ ಅಂತಾರಾಷ್ಟ್ರೀಯ ಕುಮ್ಮಕ್ಕು ಇದೆ. ಉಗ್ರರ ವಿರುದ್ಧದ ಕೇಸ್ಗಳನ್ನು ಕೂಡಲೇ ಎನ್ಐಎ ತನಿಖೆಗೆ ಕೊಡಬೇಕು. ಬೆಂಗಳೂರು ಸುರಕ್ಷತೆ ಬಗ್ಗೆ ಅಧಿಕಾರಿಗಳು ಫೀಲ್ಡ್ಗೆ ಇಳಿಬೇಕು. ಇದರ ಹಿಂದೆ ಅಂತಾರಾಷ್ಟ್ರೀಯ ಸಂಸ್ಥೆಗಳ ಬೆಂಬಲವಿದೆ. ಬೆಂಗಳೂರಿನಲ್ಲಿ ಸ್ಫೋಟ ಮಾಡುವ ಹುನ್ನಾರ ಇದೆ. ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬಿಲದಲ್ಲಿದ್ದ ದುಷ್ಟಶಕ್ತಿಗಳಿಗೆ ಹೊಸ ಸರ್ಕಾರದಿಂದ ಪ್ರೇರಣೆ: ಕಳೆದ 2 ತಿಂಗಳಲ್ಲಿ ಬಿಲದಲ್ಲಿ ಇದ್ದ ಇಂತಹ ದುಷ್ಟ ಶಕ್ತಿಗಳಿಗೆ ಹೊಸ ಸರ್ಕಾರದಿಂದ ಪ್ರೇರಣೆ ಸಿಕ್ಕಿದೆ ಅಂತ ಕಾಣುತ್ತದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಸಿಸಿಬಿ ಪೊಲೀಸರನ್ನು ಅಭಿನಂದಿಸುತ್ತೇನೆ. ಒಳ್ಳೆಯ ಕೆಲಸ ಮಾಡಿದ್ದಾರೆ. ಮುಂದೆಯೂ ಒಳ್ಳೆ ಕೆಲಸ ಮಾಡಬೇಕು. ಸಿಕ್ಕಿರುವ ಶಂಕಿತ ಉಗ್ರರನ್ನು ನೋಡಿದಾಗ, ಅವರ ಬಳಿ ಸಿಕ್ಕಿರುವ ವೆಪನ್ ನೋಡಿದಾಗ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಲು ಸಜ್ಜಾಗಿದ್ದರು ಅಂತಾ ಕಾಣಿಸುತ್ತದೆ. ನಾವು ಅಪಾಯಕಾರಿ ಸನ್ನಿವೇಶದಲ್ಲಿ ಇದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
Laxmi News 24×7