ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚು ಮತಗಳನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್‌ಡಿಎ) ಪಡೆದುಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಗಳವಾರ ಬೆಂಗಳೂರಿನಲ್ಲಿ 26 ವಿರೋಧ ಪಕ್ಷಗಳು ಸೇರಿ ತಮ್ಮ ಎರಡನೇ ಏಕತಾ ಸಭೆಯನ್ನು ನಡೆಸಿದ ಕೆಲವೇ ಗಂಟೆಗಳ ಬಳಿಕ ಸಂಜೆ, ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎನ್‌ಡಿಎ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ನಮ್ಮ ಎಲ್ಲ ಮೈತ್ರಿ ಪಾಲುದಾರರು ಪ್ರಾಮಾಣಿಕವಾಗಿ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಶೇ 38 ರಷ್ಟು (ಒಟ್ಟು ಮತಗಳಲ್ಲಿ) ಮತಗಳನ್ನು ಪಡೆದಿದೆ. ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ನಾವು ಮಾಡಿದ ಕೆಲಸವನ್ನು ಗುರುತಿಸಿ, ಅವರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಹೀಗಾಗಿ, 2019ರ ಚುನಾವಣೆಯಲ್ಲಿ ಒಟ್ಟು ಶೇ 45ರಷ್ಟು ಮತಗಳನ್ನು ನಮಗೆ ನೀಡಿದರು. ಮುಂಬರುವ ಚುನಾವಣೆಯಲ್ಲಿ ಸಹ ನಾವು ಶೇ 50ಕ್ಕಿಂತ ಹೆಚ್ಚು ಮತಗಳನ್ನು ಪಡೆಯುತ್ತೇವೆ ಎಂಬ ವಿಶ್ವಾಸವಿದೆ” ಎಂದರು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಶೇಕಡಾ 50ಕ್ಕಿಂತಲೂ ಹೆಚ್ಚು ಮತಗಳನ್ನು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.