ಚಿಕ್ಕೋಡಿ(ಬೆಳಗಾವಿ): ಒಂದು ಕಾಲದಲ್ಲಿ ರೈತರು ನ್ಯಾಯಯುತ ಬೆಲೆ ಸಿಗದೆ ಕ್ವಿಂಟಾಲ್‌ಗಟ್ಟಲೆ ಟೊಮೆಟೊವನ್ನು ರಸ್ತೆಗೆ ಎಸೆಯುವ ಅನಿವಾರ್ಯ ಪರಿಸ್ಥಿತಿ ಇತ್ತು.
ಲಕ್ಷಾಂತರ ದುಡ್ಡು ಹಾಕಿ ಕಷ್ಟ ಪಟ್ಟು ದುಡಿದ ಬೆಳೆ ಫಸಲು ಕೊಟ್ಟು ರೈತ ನಿಟ್ಟುಸಿರು ಬಿಡೋ ಅಷ್ಟ್ರಲ್ಲಿ ಬೆಳೆ ಕುಸಿತ ರೈತನಿಗೆ ಅಘಾತ ನಿಡಿತ್ತು. ಆದರೆ ಈ ಬಾರಿ ದುಬಾರಿ ಟೊಮೆಟೊದಿಂದಾಗಿ ಅನೇಕ ರೈತರ ಭವಿಷ್ಯ ಬದಲಾಗಿದೆ.
ಟೊಮೆಟೊ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದರೆ, ಅನ್ನದಾತರು ಮಾತ್ರ ಖುಷಿಯಾಗಿದ್ದಾರೆ. ಟೊಮೆಟೊ ಬೆಳೆದ ಕೆಲ ರೈತರು ತಾವು ಈವರೆಗ ಕಂಡಿರದಷ್ಟು ಹಣವನ್ನು ಈ ಬೆಲೆ ಏರಿಕೆ ಸೀಸನ್‌ನಲ್ಲಿ ಪಡೆದುಕೊಂಡಿದ್ದಾರೆ. ಅದಕ್ಕೆ ಉದಾಹರಣೆ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ರೈತ ಮಹೇಶ್ ಹಿರೇಮಠ.
ಅನ್ನದಾತರು ಆರ್ಥಿಕವಾಗಿ ಸಬಲವಾಗಲು ಕೃಷಿಯಲ್ಲಿ ಹಲವಾರು ಹೊಸ ಪ್ರಯೋಗಗಳನ್ನು ಮಾಡುತ್ತಾರೆ. ಈ ಪ್ರಯತ್ನದಲ್ಲಿ ಹಲವು ಬೆಳೆಗಳು ಕೈ ಕೊಟ್ಟರೂ ಅದೃಷ್ಟಕ್ಕೆ ಒಂದಂತೆ ಕೆಲ ಬೆಳೆಗಳು ಕೈ ಹಿಡಿದು ರೈತರ ಜೀವನದ ದಿಕ್ಕನ್ನೇ ಬದಲಾಯಿಸುತ್ತವೆ. ಅದೇ ರೀತಿ ಚಿಕ್ಕೋಡಿ ರೈತನಿಗೆ ಟೊಮೆಟೊ ವರದಾನವಾಗಿದೆ. ಇದರಿಂದ ಆತನ ಅದೃಷ್ಟ ಖುಲಾಯಿಸಿದೆ.