ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ)ವಿಧೇಯಕ 2023, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ 2023 ಮತ್ತು ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ)(ತಿದ್ದುಪಡಿ) ವಿಧೇಯಕ 2023 ಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.
ವಿಧಾನ ಪರಿಷತ್ ವಿತ್ತೀಯ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ವಿಧೇಯಕ 2023 ಮಂಡಿಸಿದರು.
ಮುಂಬೈನಿಂದ, ದೆಹಲಿಯಿಂದ ಗುತ್ತಿಗೆದಾರರು ಬರುತ್ತಾರೆ. ಆದ್ರೆ ಸ್ಥಳೀಯವಾಗಿಯೇ ಗುತ್ತಿಗೆದಾರರು ಬರಬೇಕು ಎನ್ನುವುದು ನಮ್ಮ ಆಶಯ. ಎಸ್ಸಿ ಕೋಟಾದ ಕಾಮಗಾರಿಗಳನ್ನು ಎಸ್ಸಿ ಗುತ್ತಿಗೆದಾರರು ಗುತ್ತಿಗೆ ಪಡೆದು ಬೇರೆಯವರಿಗೆ ಸಬ್ ಕಾಂಟ್ರ್ಯಾಕ್ಟ್ ಕೊಡುತ್ತಾರೆ. ಅವರು ಸರಿಯಾಗಿ ಕೆಲಸ ಮಾಡದಿದ್ದರೆ, ಎಸ್ಸಿ ಗುತ್ತಿಗೆದಾರರಿಗೆ ಕೆಟ್ಟ ಹೆಸರು ಬರಲಿದೆ. ಹಾಗಾಗದಂತೆ ನೋಡಿಕೊಳ್ಳಬೇಕಿದೆ. ಎಸ್ಸಿ ಗುತ್ತಿಗೆದಾರರು ಪಡೆದ ಗುತ್ತಿಗೆ ಕೆಲಸವನ್ನು ಎಸ್ಸಿ ಗುತ್ತಿಗೆದಾರರೇ ಮಾಡಬೇಕು. ಇಲ್ಲದಿದ್ದರೆ ಆಶಯ ಈಡೇರುವುದಿಲ್ಲ. ಅಲ್ಲದೇ ಹೊಸದಾಗಿ ಬರುವ ಎಸ್ಸಿ ಗುತ್ತಿಗೆದಾರರಿಗೆ ಹೂಡಿಕೆಯ ಸರಿಯಾದ ಮಾಹಿತಿ ಇರುವುದಿಲ್ಲ. ಇದರಿಂದ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಹಾಗಾಗಿ ನೂತನ ಗುತ್ತಿಗೆದಾರರಿಗೆ ತರಬೇತಿ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿ ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು. ನಂತರ ಧ್ವನಿ ಮತದ ಮೂಲಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.
ಜಿಎಸ್ಟಿ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ: ಎರಡನೇಯ ವಿಧೇಯಕವಾಗಿ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ(ತಿದ್ದುಪಡಿ) ವಿಧೇಯಕ 2023 ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಮಂಡಿಸಿದರು. ಜಿಎಸ್ಟಿ ಕಾನೂನಿಗೆ 22 ತಿದ್ದುಪಡಿ ತಂದಿದ್ದು, 6 ತಿದ್ದುಪಡಿ ವರ್ತಕರ ಸ್ನೇಹಿ, 16 ಅಂಶ ಸುಗಮ ತೆರಿಗೆ ಸಂಗ್ರಹ ಮತ್ತು ಆಡಳಿತಕ್ಕೆ ಸಂಬಂಧಿಸಿದ ತಿದ್ದುಪಡಿಗಳಾಗಿವೆ. ವರ್ತಕರ ಸ್ನೇಹಿ ಮತ್ತು ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಬರುವುದಕ್ಕೆ ಪೂರಕವಾಗಿದೆ. ಹಾಗಾಗಿ ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು.