ಚಿಕ್ಕಮಗಳೂರು: ಇಡೀ ಪ್ರಪಂಚವೇ ಕಾತರದಿಂದ ಕಾಯುತ್ತಿದ್ದ, ಭಾರತದ ಕನಸಿನ ಯೋಜನೆ ಚಂದ್ರಯಾನ 3 ನಿನ್ನೆಯಷ್ಟೆ ಇಸ್ರೋ ಕೇಂದ್ರದಿಂದ ಯಶಸ್ವಿಯಾಗಿ ಬಾಹ್ಯಾಕಾಶ ಕಕ್ಷೆಗೆ ಉಡಾವಣೆಗೊಂಡಿದೆ.
ಚಂದ್ರಯಾನ 3 ಯೋಜನೆ ಹಾಗೂ ಇದರ ಯಶಸ್ವಿ ಉಡಾವಣೆಯ ಹಿಂದೆ ಹಲವಾರು ವಿಜ್ಞಾನಿಗಳ ಪರಿಶ್ರಮವಿದೆ. ದೇಶದ ಬೇರೆ ಬೇರೆ ಜಿಲ್ಲೆಗಳ ವಿಜ್ಞಾನಿಗಳು ಈ ಯೋಜನೆಗಾಗಿ ಹಗಲು ಇರುಳು ಕೆಲಸ ಮಾಡಿದ್ದಾರೆ.
ಇದೀಗ ಆಂಧ್ರಪ್ರದೇಶದ ಶ್ರೀ ಹರಿಕೋಟಾ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಉಡಾವಣೆ ಮಾಡಿದ ಚಂದ್ರಯಾನ 3 ರ ತಂಡದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಯುವತಿ ಭಾಗವಹಿಸಿದ್ದು, ಜಿಲ್ಲೆಯ ಜನರ ಸಂತಸ ಸಂಭ್ರಮಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯ, ಬಾಳೆಹೊನ್ನೂರು ಸಮೀಪದ ತುಪ್ಪೂರು ಗ್ರಾಮದ ಯುವತಿ ಇರುವುದು ಆ ಜಿಲ್ಲೆಗೆ ಮಾತ್ರವಲ್ಲದೇ ನಮ್ಮ ರಾಜ್ಯಕ್ಕೆ ಹೆಮ್ಮೆ ತಂದಿದೆ.ಬಾಳೆಹೊನ್ನೂರು ನಗರದಲ್ಲಿ ಕಾಫಿ ವ್ಯವಹಾರ ಮಾಡುತ್ತಿರುವ ಕೇಶವ ಮೂರ್ತಿ, ಮಂಗಳ ದಂಪತಿಯ ಪುತ್ರಿ ಡಾ. ಕೆ. ನಂದಿನಿ ಚಂದ್ರಯಾನ 3 ತಂಡದಲ್ಲಿ ಇದ್ದು, ನಿನ್ನೆ ನಡೆದ ಯಶಸ್ವಿ ಉಡಾವಣೆಯಲ್ಲಿಯೂ ಈಕೆ ಪಾಲ್ಗೊಂಡಿರುವುದು ಆಕೆಯ ಕುಟುಂಬಸ್ಥರು ಸೇರಿದಂತೆ ಸ್ಥಳೀಯರಲ್ಲಿ ಸಂತೋಷ ಹಾಗೂ ಸಂಭ್ರಮ ಸಡಗರ ತರಿಸಿದೆ. ಡಾ. ನಂದಿನಿ ಕಳೆದ 8 ವರ್ಷಗಳಿಂದ ಬೆಂಗಳೂರಿನ ಇಸ್ರೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇವರು 2019 ರ ಚಂದ್ರಯಾನ 2 ರ ತಂಡದಲ್ಲೂ ಭಾಗವಹಿಸಿದ್ದರು. ಸತತ ಎರಡನೇ ಬಾರಿಯೂ ಕಾರ್ಯ ನಿರ್ವಹಿಸಿ ಬಾಳೆಹೊನ್ನೂರಿಗೆ ಕೀರ್ತಿ ತರುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.