ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಹೊಸ ಆಯಪ್ ಸಿದ್ದಪಡಿಸಲಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಆಯಪ್ ಬಿಡುಗಡೆ ಮಾಡಿ ಅರ್ಜಿ ಸ್ವೀಕಾರ ಕಾರ್ಯ ಆರಂಭಿಸಲಾಗುತ್ತದೆ.
ಆಗಸ್ಟ್ 16ರಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯೆ ಹೇಮಲತಾ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾವು ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿಯನ್ನು ಇನ್ನೂ ಕರೆದಿಲ್ಲ. ಅರ್ಜಿಯನ್ನೇ ಕರೆದಿಲ್ಲ ಎಂದ ಮೇಲೆ ಸರ್ವರ್ ಡೌನ್ ಪ್ರಶ್ನೆಯೇ ಬರುವುದಿಲ್ಲ. ಸರ್ವರ್ ಡೌನ್ ಆರೋಪವು ನಿರಾಧಾರವಾದುದು ಎಂದು ಹೇಳಿದರು.
ಯೋಜನೆಗಾಗಿ ಹೊಸದಾಗಿ ಆಯಪ್ ಸಿದ್ದಪಡಿಸಿದ್ದು, ಅದು ಇನ್ನೂ ಪ್ರಾಯೋಗಿಕ ಪರೀಕ್ಷೆಯಲ್ಲಿದೆ. ಆಯಪ್ ಇನ್ನೂ ರಿಲೀಸ್ ಆಗಿಲ್ಲ. ನಾಲ್ಕೈದು ದಿನದಲ್ಲಿ ಆಯಪ್ ಬಿಡುಗಡೆ ಮಾಡಿ ನಂತರ ಅರ್ಜಿ ಕರೆಯುವ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಪರೀಕ್ಷಾರ್ಥ ಪ್ರಯೋಗದ ನಂತರ ಅರ್ಜಿ ಅಪ್ಲೋಡ್ ಮಾಡುವ ಕೆಲಸಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಬೆಲೆ ಏರಿಕೆಯಿಂದ ತತ್ತರಿಸಿರುವವರ ನೆರವಿಗೆ ಯೋಜನೆ: ಮನೆಯ ಯಜಮಾನಿ ಯಾರು? ಅತ್ತೆಯೋ ಸೊಸೆಯೋ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಮನೆಯ ಯಜಮಾನಿ ಸ್ವಾವಲಂಬಿತ ಜೀವನ ನಡೆಸಲು ಮುಖ್ಯಮಂತ್ರಿಗಳು ಈ ಯೋಜನೆ ತರುತ್ತಿದ್ದಾರೆ. ಹಾಗಾಗಿ ಕುಟುಂಬದ ಯಜಮಾನಿಗೆ ಈ ಯೋಜನೆಯ ಲಾಭ ಹೋಗಲಿದೆ. ಕಾಂಗ್ರೆಸ್ ಪಕ್ಷದವರು ಯಾವುದೇ ಮನೆಯಲ್ಲಿ ಜಗಳ ಹಚ್ಚಲು ಮಾಡಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಮಹಿಳೆಗೆ ಸಹಾಯ ಆಗಲಿ ಎನ್ನುವ ಕಾರಣಕ್ಕೆ ಈ ಯೋಜನೆ ಮಾಡಲಾಗಿದೆ. ಇದರ ಲಾಭವನ್ನು ಆಗಸ್ಟ್ 16ರ ನಂತರ ಕುಟುಂಬದ ಯಜಮಾನಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪಂಚ ಗ್ಯಾರಂಟಿಗಳ ಮಾಹಿತಿಗಾಗಿ ಸಹಾಯವಾಣಿ ಆರಂಭಿಸಿದ್ದೇವೆ. ನಮ್ಮ ಭಾಗ್ಯಲಕ್ಷ್ಮಿ ಯೋಜನೆ ಬಗ್ಗೆ ಜನರು ಹೆಚ್ಚಿನ ಉತ್ಸಾಹ ತೋರಿದ್ದಾರೆ. ಗೃಹಲಕ್ಷ್ಮಿ ಯೋಜನೆ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಪ್ರಾಯೋಗಿಕವಾಗಿ ಸಹಾಯವಾಣಿ ಆರಂಭಿಸಿದ್ದೇವೆ. ಈ ಹಿಂದಿನ ಭಾಗ್ಯಜ್ಯೋತಿ ಯೋಜನೆಯಲ್ಲಿನ ನ್ಯೂನತೆ ಸರಿಪಡಿಸಿ, ಗೃಹಲಕ್ಷ್ಮಿ ಯೋಜನೆ ತರಲಿದ್ದೇವೆ. ಯಾರಿಗೂ ಕಷ್ಟವಾಗಬಾರದು ಎಂದು ಈ ಆಯಪ್ ತಯಾರಿಸುತ್ತೇವೆ. ಪರೀಕ್ಷಾರ್ಥ ಪ್ರಯೋಗ ನಡೆಸುತ್ತಿದ್ದೇವೆ, ನಾಲ್ಕೈದು ದಿನದಲ್ಲಿ ಅಪ್ಲೋಡ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಿದ್ದೇವೆ ಎಂದರು.
Laxmi News 24×7