ಬೆಂಗಳೂರು: ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿ ಬದಲಾಗಿ ಹಣ ನೀಡುವುದಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿತ್ತು. ಮೊದಲ ಹಂತದಲ್ಲಿ ಮೈಸೂರು, ಕೋಲಾರ, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಬಾಗಲಕೋಟೆ ಬಳಿಕ, ಇಂದು ಇತರೆ ಜಿಲ್ಲೆಗಳ ಪಡಿತರ ಚೀಟಿದಾರರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ.
ಜುಲೈ.10ರಂದು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಹಣ ನೀಡುವುದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ಮೈಸೂರು, ಕೋಲಾರ, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಬಾಗಲಕೋಟೆ ಸೇರಿದಂತೆ ಒಟ್ಟು 20 ಲಕ್ಷ ಕಾರ್ಡ್ ಹೊಂದಿರುವ 69 ಲಕ್ಷ ಫಲಾನುಭವಿಗಳ ಖಾತೆಗೆ 115 ಕೋಟಿ ರೂ ವರ್ಗಾವಣೆಯಾಗಿತ್ತು.
ಇಂದು ಎರಡನೇ ಹಂತದಲ್ಲಿ ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಕೊಪ್ಪಳ ಜಿಲ್ಲೆಗಳ 13 ಲಕ್ಷ ಕಾರ್ಡ್ ಹೊಂದಿರುವ 49 ಲಕ್ಷ ಫಲಾನುಭವಿಗಳ ಖಾತೆಗೆ 80 ಕೋಟಿ ರೂ ಹಣ ಡಿಬಿಟಿ ಮೂಲಕ ಜಮೆಯಾಗಲಿದೆ. ಈ ಬಳಿಕ ಮುಂದಿನ ನಾಲ್ಕು ದಿನಗಳಲ್ಲಿ ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಗದಗ, ವಿಜಯಪುರ, ಬಳ್ಳಾರಿ, ಬೀದರ್, ಕಲಬುರ್ಗಿ, ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಗಳ ಪಡಿತರ ಚೀಟಿದಾರರ ಖಾತೆಗೆ ಹಣ ಜಮೆ ಆಗಲಿದೆ.
ಇನ್ನೂ ಕೊಡಗು, ಚಿಕ್ಕಬಳ್ಳಾಪುರ, ಮಂಡ್ಯ, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ, ಉಡುಪಿ, ಹಾವೇರಿ ಹಾಗೂ ವಿಜಯನಗರ ಜಿಲ್ಲೆಗಳ ಕಾರ್ಡ್ ದಾರರಿಗೂ ಹಣ ಜಮಾಗೆ ದತ್ತಾಂಶವನ್ನು ಎನ್‌ಐಸಿಗೆ ಕಳುಹಿಸಲಾಗಿದೆ.
ಆದರೇ ಬ್ಯಾಂಕ್ ಖಾತೆ ಇಲ್ಲದಿರುವಿಕೆ, ಬ್ಯಾಂಕ್ ಖಾತೆ ನಿಷ್ಕ್ರೀಯ, ತಪ್ಪಾದ ಆಧಾರ್ ಸಂಖ್ಯೆ, ರೇಷನ್ ಕಾರ್ಡ್ ಗೆ ಆಧಾರ್ ಜೋಡಣೆ ಆಗದೇ ಇರೋದು ಸೇರಿದಂತೆ ವಿವಿಧ ಕಾರಣಕ್ಕಾಗಿ 15 ಲಕ್ಷ ಕಾರ್ಡ್ ದಾರರಿಗೆ ನೇರನಗದು ವರ್ಗಾವಣೆಯಿಂದ ವಂಚಿತರಾಗುವಂತಾಗಿದೆ. ಇವರಿಗೂ ಹಣ ವರ್ಗಾವಣೆ ಮಾಡುವ ಸಂಬಂಧ ಆಹಾರ ಇಲಾಖೆಯಿಂದ ವಿಶೇಷ ಕ್ರಮ ವಹಿಸಲಾಗಿದೆ.
ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ಅಂತ ಚೆಕ್ ಮಾಡಲು ಹೀಗೆ ಮಾಡಿ
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಹಣ ವರ್ಗಾವಣೆಯ ಸ್ಥಿತಿಯನ್ನು ಪರಿಶೀಲಿಸಬಹುದಾಗಿದೆ.https://ahara.kar.nic.in/lpg/ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಕಾರ್ಡ್ ಹೊಂದಿರುವವರು ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾದ ಹಣದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.