ಬೆಂಗಳೂರು: ಆಶಾ ಕಾರ್ಯಕರ್ತೆಯರು ಖಾಯಂ ನೌಕರರಲ್ಲ ಹಾಗಾಗಿ ಅವರಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ, ಆದರೆ, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳೆಲ್ಲವೂ ಅವರಿಗೆ ಅನ್ವಯವಾಗಲಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಶಾ ಕಾರ್ಯಕರ್ತೆಯರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ, ಅವರು ಸ್ವಯಂ ಪ್ರೇರಿತರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಅದಕ್ಕಾಗಿ ರಾಜ್ಯ ಸರ್ಕಾರ ಅವರಿಗೆ ಐದು ಸಾವಿರ ರೂ.ಗೌರವಧನ ಕೊಡುತ್ತಿದೆ, ಇದರ ಜೊತೆಗೆ 5 ರಿಂದ 8 ಸಾವಿರ ಅವರ ಕೆಲಸದ ಆಧಾರದಲ್ಲಿ ಇನ್ಸೆಂಟಿವ್ ಸಿಗಲಿದೆ. ಇನ್ಸೆಂಟಿವ್ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡರ ಪಾಲೂ ಇದೆ. ಆದರೆ, ಅವರಿಗೆ ಪಿಂಚಣಿ ನೀಡಲಾಗಲ್ಲ, ಅವರು ಖಾಯಂ ನೌಕರರಲ್ಲದ ಕಾರಣ ಅವರಿಗೆ ಪಿಂಚಣಿ ನೀಡುವ ಪ್ರಸ್ತಾಪ ಸದ್ಯಕ್ಕೆ ಇಲ್ಲ. ಈಗಿರುವ ಪ್ರಕಾರ ಕೊಡಲು ಸಾಧ್ಯವೂ ಇಲ್ಲ. ಭವಿಷ್ಯದಲ್ಲಿ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.
ಆಶಾ ಕಾರ್ಯಕರ್ತೆಯರಿಗೆ ಅವರ ಎಲ್ಲಾ ಸೇವೆಗೆ ಸಂಭಾವನೆ ಕೊಡಲಾಗುತ್ತಿದೆ. ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳು ಆಶಾ ಕಾರ್ಯಕರ್ತೆಯರಿಗೆ ಸಿಗಲಿದೆ. ಅವರ ಕೆಲಸಕ್ಕೂ ಯೋಜನೆಗೂ ಸಂಬಂಧ ಇಲ್ಲ, ಅವರೆಲ್ಲ ಗ್ಯಾರಂಟಿ ಯೋಜನೆಗಳಿಗೆ ಅರ್ಹರಿದ್ದಾರೆ. ಆಶಾ ಕಾರ್ಯಕರ್ತೆಯರ ಕೆಲಸಕ್ಕೆ ಸ್ಮಾರ್ಟ್ ಫೋನ್ ಅವಶ್ಯಕತೆ ಬಗ್ಗೆ ಸದಸ್ಯರು ಗಮನ ಸೆಳೆದಿದ್ದಾರೆ ಹಾಗಾಗಿ ಸ್ಮಾರ್ಟ್ ಫೋನ್ ನೀಡುವ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ತಿಳಿಸಿದರು.