ಬೆಂಗಳೂರು : ಹಂಪಿ ಯೋಜನಾ ಪ್ರಾಧಿಕಾರ ವ್ಯಾಪ್ತಿಯ ಆನೆಗೊಂದಿ ಪ್ರದೇಶದಲ್ಲಿ ಕೃಷಿ ಭೂಮಿಯಲ್ಲಿ ಅನಧಿಕೃತ ಹೋಂ ಸ್ಟೇ ನಡೆಸಲು ಅವಕಾಶವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿಧಾನಸಭೆಗೆ ಸ್ಪಷ್ಟಪಡಿಸಿದ್ದಾರೆ.
ಇಂದು ಶೂನ್ಯವೇಳೆಯಲ್ಲಿ ಸದಸ್ಯ ಜಿ ಜನಾರ್ದನರೆಡ್ಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಹಂಪಿ ಯೋಜನಾ ಪ್ರಾಧಿಕಾರ ವ್ಯಾಪ್ತಿಯಲ್ಲಿ 15 ಗ್ರಾಮಗಳು ಬರುತ್ತವೆ. 2008ರಲ್ಲೇ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ಹಂಪಿ ಪ್ರಾಧಿಕಾರದ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ 58 ಅನಧಿಕೃತ ಹೋಂ ಸ್ಟೇಗಳಿವೆ. ಇದರ ಬಗ್ಗೆ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿದೆ. 27 ಅನಧಿಕೃತ ಹೋಂಸ್ಟೇ ತೆರವುಗೊಳಿಸಲಾಗಿದೆ. 31 ಹೋಂಸ್ಟೇಗೆ ಬೀಗಮುದ್ರೆ ಹಾಕಲಾಗಿದೆ. 21 ಹೋಂಸ್ಟೇಗಳ ವಿಚಾರ ನ್ಯಾಯಾಲಯದಲ್ಲಿದೆ. ಭೂ ಪರಿವರ್ತನೆಯಾಗದೇ, ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. ಅಕ್ರಮ- ಸಕ್ರಮ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಆಡಳಿತ ಪಕ್ಷದ ಸದಸ್ಯ ಬಸವರಾಜರಾಯರೆಡ್ಡಿ ಮಾತನಾಡಿ, ಅಲ್ಲಿ ಸಾಕಷ್ಟು ಡ್ರಗ್ ವ್ಯವಹಾರ ನಡೆಯುತ್ತಿದ್ದು, ನಿಯಂತ್ರಣ ಮಾಡಬೇಕು ಎಂಬ ಸಲಹೆ ಮಾಡಿದರು. ಆಗ ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷರು ರಾಜ್ಯದಲ್ಲಿ ಡ್ರಗ್ ಮಾಫಿಯ ಮಟ್ಟ ಹಾಕಲು ಪೊಲೀಸ್ ಇಲಾಖೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ನಿಯಂತ್ರಿಸಬೇಕು ಎಂದು ಸೂಚಿಸಿದರು.
Laxmi News 24×7