Breaking News

ಆನ್​​​ಲೈನ್ ಬೆಟ್ಟಿಂಗ್ ಗೀಳು: ಅಣ್ಣನ ಮನೆಗೆ ಕನ್ನ ಹಾಕಿದ ತಮ್ಮನ ಬಂಧನ

Spread the love

ಬೆಂಗಳೂರು: ಆನ್ ಲೈನ್ ಬೆಟ್ಟಿಂಗ್ ವ್ಯಾಮೋಹಕ್ಕೆ ಬಿದ್ದು ಅಣ್ಣನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ತಮ್ಮನನ್ನ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಮೀಜಾನ್ ಎಂಬುವರು ಜುಲೈ 4ರಂದು ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ತಮ್ಮನೇ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಮೊಹಮ್ಮದ್ ಪರ್ವೀನ್ (22) ಎಂಬುವನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಸೋಮೇಶ್ವರ ನಗರದಲ್ಲಿ ದೂರುದಾರ ಮಿಜಾನ್ ವಾಸವಾಗಿದ್ದ. ಈತನೊಂದಿಗೆ ತಾಯಿ – ತಮ್ಮ ಸಹ ವಾಸವಾಗಿದ್ದರು. ಮಿಜಾನ್ ಲಿಫ್ಟ್ ಇನ್ಸ್ಟಾಲೇಷನ್ ಕೆಲಸ ಮಾಡಿಕೊಂಡಿದ್ದರೆ, ಆರೋಪಿ ಪರ್ವೀನ್ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ. ಅವಿವಾಹಿತನಾಗಿದ್ದ ಪರ್ವೀನ್ ಆನ್ ಲೈನ್ ಬೆಟ್ಟಿಂಗ್ ಗೀಳಿಗೆ ಬಿದ್ದಿದ್ದ. ಬೆಟ್ಟಿಂಗ್​ನಲ್ಲಿ ಹಣ ಹೂಡಿ ಕಳೆದುಕೊಂಡಿದ್ದ. ಇದರಿಂದ ಬುದ್ದಿ ಕಲಿಯದ ಆರೋಪಿ ಬೆಟ್ಟಿಂಗ್ ಆಡಿಯೇ ಹೆಚ್ಚು ಹಣ ಗಳಿಸಬೇಕೆಂಬ ಹಪಾಹಪಿಗೆ ಬಿದ್ದಿದ್ದ. ಆದರೆ, ಈತನ ಬಳಿ ಅಷ್ಟೊಂದು ಹಣವಿರಲಿಲ್ಲ. ಹೀಗಾಗಿ ಮನೆಯಲ್ಲಿದ್ದ ಚಿನ್ನಾಭರಣದ ಮೇಲೆ ಕಣ್ಣು ಹಾಯಿಸಿದ್ದ.

ಯಾರಿಗೂ ತಿಳಿಯದೇ ಕಳ್ಳತನ ಮಾಡಿದರೆ ಗೊತ್ತಾಗುವುದಿಲ್ಲ ಎಂದು ಭಾವಿಸಿ ಜುಲೈ 4 ರಂದು ತಾನು ವಾಸವಾಗಿದ್ದ ಮನೆಯಲ್ಲಿ 86 ಗ್ರಾಂ ಚಿನ್ನ-ಬೆಳ್ಳಿ ಆಭರಣ ಹಾಗೂ 45 ಸಾವಿರ ರೂ. ನಗದು ದೋಚಿದ್ದ. ಸಂಜೆ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವ ಬಗ್ಗೆ ಮಿಜಾನ್​ಗೆ ಗೊತ್ತಾಗಿದೆ. ಈ ಸಂಬಂಧ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್ಸ್​ಪೆಕ್ಟರ್​ ಹನುಮಂತ ಕೆ.ಭಜಂತ್ರಿ ನೇತೃತ್ವದ ತಂಡ ಆರೋಪಿ ಮೊಹಮ್ಮದ್ ಪರ್ವೀನ್​ನನ್ನು ಕರೆಯಿಸಿ ವಿಚಾರಣೆಗೆ ಒಳಪಡಿಸಿದಾಗ ಅನುಮಾನಸ್ಪಾದ ರೀತಿ ವರ್ತಿಸಿ ತನಗೆ ಏನು ಗೊತ್ತಿಲ್ಲವೆಂಬಂತೆ ಹೇಳಿಕೆ ನೀಡಿದ್ದ.

ಪೊಲೀಸ್ ಶೈಲಿಯಲ್ಲಿ ವಿಚಾರಿಸಿದಾಗ ತಾನೇ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದ. ಆನ್ ಲೈನ್ ಬೆಟ್ಟಿಂಗ್ ಆಡಲು ಕೃತ್ಯವೆಸಗಿರುವುದಾಗಿ ತಿಳಿಸಿದ್ದಾನೆ. ಕದ್ದಿದ್ದ 86 ಗ್ರಾಂ ಚಿನ್ನ ಪೈಕಿ ಸ್ನೇಹಿತನಿಗೆ 18 ಗ್ರಾಂ ಚಿನ್ನ ನೀಡಿದರೆ ಉಳಿದ ಚಿನ್ನವನ್ನ ಸ್ಕೂಟರ್​ನಲ್ಲೇ ಇರಿಸಿಕೊಂಡಿದ್ದ. ಸದ್ಯ ಆತನಿಂದ 78.3 ಗ್ರಾಂ ಚಿನ್ನ, 288 ಗ್ರಾಂ ಬೆಳ್ಳಿಯನ್ನ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ