ಬೆಂಗಳೂರು : ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಇಂದು (ಭಾನುವಾರ) ಬೆಳಗ್ಗೆ ನಗರ ಪ್ರದಕ್ಷಣೆ ಹಮ್ಮಿಕೊಂಡು ಮೊದಲಿಗೆ ಇಂದಿರಾ ಗಾಂಧಿ ಕ್ಯಾಂಟೀನ್ ಪರಿಸ್ಥಿತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಯಾವುದೇ ಅಧಿಕಾರಿಗಳು ಹಾಗು ಸಿಬ್ಬಂದಿಗೆ ಮುನ್ಸೂಚನೆ ನೀಡಿರಲಿಲ್ಲ.
ಮೊದಲು ದಾಸರಹಳ್ಳಿ ವಲಯದ ವಾರ್ಡ್ ಸಂಖ್ಯೆ 39ರ ಚೊಕ್ಕಸಂದ್ರದ ಇಂದಿರಾ ಗಾಂಧಿ ಕ್ಯಾಂಟೀನ್ಗೆ ಬೆಳಗ್ಗೆ 9:10ಕ್ಕೆ ಭೇಟಿ ನೀಡಿ, ತಿಂಡಿ ಕೇಳಿದರು. ಆದರೆ ಅದಾಗಲೇ ಅಲ್ಲಿ ತಿಂಡಿ ಖಾಲಿ ಆಗಿತ್ತು. ಎಷ್ಟು ಪ್ಲೇಟ್ ಬರುತ್ತದೆ ಎಂದು ಕ್ಯಾಂಟೀನ್ ಮ್ಯಾನೇಜರ್ಗೆ ಕೇಳಿದಾಗ 208 ಪ್ಲೇಟ್ ಬಂದು ಖಾಲಿ ಆಗಿದೆ ಎಂದರು. ಮಾಧ್ಯಮಮಿತ್ರರಿಗೆ ತಿಂಡಿ ಕೊಡಿಸೋಣ ಅಂದುಕೊಂಡೆ, ಆದರೆ ಖಾಲಿ ಆಗಿದೆಯಲ್ಲ ಎಂದು ನಗೆ ಬೀರಿದರು. ಸಾಕಷ್ಟು ಪ್ರಮಾಣದಲ್ಲಿ ತಿಂಡಿ ಪೂರೈಕೆ ಖಾತರಿಪಡಿಸಿಕೊಳ್ಳಲು ಸಚಿವರು ಸೂಚಿಸಿದರು.
ನಂತರ ದಾಸರಹಳ್ಳಿಯ 15ನೇ ವಾರ್ಡ್ ಕ್ಯಾಂಟೀನ್ಗೆ ಭೇಟಿ ನೀಡಿ ತಾವು ಉಪ್ಪಿಟ್ಟು, ಕೇಸರಿಬಾತ್ ಸವಿದರು. ಈ ಸಂದರ್ಭದಲ್ಲಿ ಪಕ್ಕದಲ್ಲಿ ತಿಂಡಿ ತಿನ್ನುತ್ತಿದ್ದವರನ್ನು ಮಾತನಾಡಿಸಿ, ಮಾಹಿತಿ ಪಡೆದರು. ಆ ವ್ಯಕ್ತಿಯಿಂದ ಕ್ಯಾಂಟೀನ್ ಸಿಬ್ಬಂದಿ ₹5 ಬದಲು ₹10 ಪಡೆದಿರುವುದು ಗಮನಕ್ಕೆ ಬಂದಾಗ ಅದನ್ನು ಪ್ರಶ್ನಿಸಿದರು. ಇದೇ ಸಮಯದಲ್ಲಿ ಇಂದಿರಾ ಕ್ಯಾಂಟೀನ್ ಕುಂದುಕೊರತೆ ಕುರಿತು ದೂರು ಸಲ್ಲಿಸುವ ಸಹಾಯವಾಣಿಗೆ ಕರೆ ಮಾಡಿಸಿದಾಗ ಸಂಪರ್ಕ ದುರಸ್ಥಿಯಲ್ಲಿರುವುದನ್ನು ಗಮನಿಸಿದರು. ತಕ್ಷಣ ಸರಿಪಡಿಸಲು ಸೂಚನೆ ಕೊಟ್ಟರು. ಅಲ್ಲದೆ, ಪ್ರತಿ ವಾರ, ತಿಂಗಳಿಗೆ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ಕೊಟ್ಟರು.
ಇದು 3ನೇ ಸಿಟಿ ರೌಂಡ್ಸ್: ಉಪಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡು ಬೆಂಗಳೂರು ನಗರ ಅಭಿವೃದ್ಧಿ ಇಲಾಖೆ ಜವಾಬ್ದಾರಿ ಹೊತ್ತಿರುವ ಡಿ.ಕೆ. ಶಿವಕುಮಾರ್ ಇಂದು ನಡೆಸಿದ್ದು ಮೂರನೇ ಬೆಂಗಳೂರು ರೌಂಡ್ಸ್. ಮೊದಲು ಬೆಂಗಳೂರಿನ ವಿವಿಧ ರಾಜಕಾಲುವೆಗಳ ಸ್ಥಿತಿಗತಿ ಪರಿಶೀಲಿಸಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದ ಡಿಸಿಎಂ, ಆದಷ್ಟು ಶೀಘ್ರವಾಗಿ ಸಮಸ್ಯೆಗಳನ್ನು ಹಾಗೂ ಒತ್ತುವರಿಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಇದರ ಬಲವಾಗಿ ಬೆಂಗಳೂರು ನಗರದ ವಿವಿಧೆಡೆ ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಬಿಬಿಎಂಪಿ ಅಧಿಕಾರಿಗಳು ಮಾಡಿದ್ದರು.