ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ನರೇಗಾ) ಮಾನವ ದಿನ ಸೃಜನೆಯಲ್ಲಿ ಬೆಳಗಾವಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.
ಜೊತೆಗೆ ಈ ಸಾಲಿನ ಆರ್ಥಿಕ ವರ್ಷದ ಕೇವಲ ಮೂರು ತಿಂಗಳಲ್ಲಿ 61.41 ಲಕ್ಷದಷ್ಟು ಮಾನವ ದಿನ ಸೃಜನೆ ಮಾಡಿರುವುದು ದಾಖಲೆಯಾಗಿದೆ ಎಂದು ಬೆಳಗಾವಿ ಜಿಪಂ ಸಿಇಒ ಹರ್ಷಲ್ ಭೊಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಗೆ 2023-24ನೇ ಸಾಲಿಗೆ 1.40 ಕೋಟಿ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿದೆ. ಅದರ ಪೈಕಿ ಎಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಲಾಗಿದೆ. ಮುಖ್ಯವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಸತತ ಪ್ರತಿದಿನ ಒಂದು ಲಕ್ಷಕ್ಕೂ ಮೇಲ್ಪಟ್ಟು ಕೂಲಿಕಾರರು ಕೆಲಸ ನಿರ್ವಹಿಸಿರುವುದು ವಿಶೇಷ. ಕಳೆದ ಸಾಲಿನ ಆರ್ಥಿಕ ವರ್ಷದ ಮೊದಲ ಈ ಮೂರು ತಿಂಗಳಲ್ಲಿ 42.67 ಲಕ್ಷ ಮಾನವ ದಿನಗಳ ಸೃಜನೆಯಾಗಿತ್ತು. ಆದರೆ ಈ ಬಾರಿ 61.41 ಲಕ್ಷ ಮಾನವ ದಿನ ಸೃಜನೆಯಾಗಿದ್ದು, ನಿರೀಕ್ಷೆಗೂ ಮೀರಿ ಸಾಧನೆಯಾಗಿದೆ. ಕಳೆದ ವರ್ಷಕ್ಕೂ ಪ್ರಸ್ತುತ ವರ್ಷಕ್ಕೂ 18.73 ಲಕ್ಷ ಮಾನವ ದಿನ ಸೃಜನೆ ಮಾಡುವುದರೊಂದಿಗೆ ಶೇ 43.91 ರಷ್ಟು ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ.
ಮಾನವ ದಿನ ಸೃಜನೆಯಲ್ಲಿ ಮೊದಲ ಐದು ಸ್ಥಾನದಲ್ಲಿರುವ ಜಿಲ್ಲಾವಾರು ಮಾಹಿತಿ
ಕ್ರ.ಸಂ. | ಜಿಲ್ಲೆ | ಮಾನವ ದಿನಗಳ ಸೃಜನೆ |
1 | ಬೆಳಗಾವಿ | 61.41 (ಲಕ್ಷ) |
2 | ರಾಯಚೂರು | 58.75 (ಲಕ್ಷ) |
3 | ಕೊಪ್ಪಳ | 57.37 (ಲಕ್ಷ) |
4 | ಬಳ್ಳಾರಿ | 49.19 (ಲಕ್ಷ) |
5 | ವಿಜಯನಗರ | 42.51 (ಲಕ್ಷ) |
ಒಂದೇ ದಿನದಲ್ಲಿ 2.78 ಲಕ್ಷ ಮಾನವ ದಿನದ ಸೃಜನೆಯ ಸಾಧನೆ: ಬೆಳಗಾವಿ ಜಿಲ್ಲೆಯು ನರೇಗಾ ಯೋಜನೆಯಡಿ ಪ್ರಪ್ರಥಮ ಬಾರಿಗೆ ದಿನಾಂಕ 01-07-2023 ರಂದು ಒಂದೇ ದಿನದಲ್ಲಿ 2.78 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿರುವುದು ರಾಜ್ಯದಲ್ಲಿಯೇ ಇಲ್ಲಿಯವರೆಗೆ ಗರಿಷ್ಠ ಸಾಧನೆಯಾಗಿದೆ.