ಬೆಂಗಳೂರು: ವಿಧಾನಸಭೆಯ ಅಧ್ಯಕ್ಷ ಯು ಟಿ ಖಾದರ್ ಅವರ ಕನ್ನಡ ಭಾಷಾ ಪದ ಪ್ರಯೋಗದ ಬಗ್ಗೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಯತ್ನಾಳ್ ಹಾಸ್ಯ ಮಾಡಿದ್ದು, ಅದನ್ನು ಸಭಾಧ್ಯಕ್ಷರು ಸ್ಪರ್ಧಾತ್ಮಕವಾಗಿ ಪರಿಗಣಿಸಿದ ಪ್ರಸಂಗ ಇಂದು ನಡೆಯಿತು.
ವಿಧಾನಸಭೆಯ ಉಪಾಧ್ಯಕ್ಷರಾಗಿ ರುದ್ರಪ್ಪ ಲಮಾಣಿ ಅವಿರೋಧವಾಗಿ ಆಯ್ಕೆಯಾದ ಮೇಲೆ ಅವರನ್ನು ಅಭಿನಂದಿಸುವ ಸಂದರ್ಭದಲ್ಲಿ ಸಭಾಧ್ಯಕ್ಷರು ಹಳ್ಳಿ ಎಂಬ ಪದವನ್ನು ಹಲ್ಲಿ ಎಂದು ಉಚ್ಛಾರಣೆ ಮಾಡಿದರು. ಅದನ್ನು ಬಸನಗೌಡ ಯತ್ನಾಳ್ ಉಲ್ಲೇಖಿಸಿ ಹಳ್ಳಿ, ಹಳ್ಳಿ ಎಂದು ತಿದ್ದುವ ಯತ್ನ ಮಾಡಿದರು. ಅದನ್ನು ಸಭಾಧ್ಯಕ್ಷರು ನಗುಮೊಗದಿಂದಲೇ ಸ್ವೀಕರಿಸಿದರು.
ಅಭಿನಂದನೆ ಮಾತು ಮುಗಿದ ಬಳಿಕ ಎದ್ದು ನಿಂತ ಯತ್ನಾಳ್ ರಾಜ್ಯದಲ್ಲಿ ಕರಾವಳಿ ಭಾಗದ ಮಂಗಳೂರು ಕನ್ನಡ ಶುದ್ಧವಾಗಿದೆ ಮತ್ತು ಸುಂದರ ಭಾಷೆಯಾಗಿದೆ. ರಾಜ್ಯದಲ್ಲಿ ಕರಾವಳಿ, ಹಳೇ ಮೈಸೂರು ಭಾಗ, ಬೆಂಗಳೂರು, ಉತ್ತರ ಕರ್ನಾಟಕ ಸೇರಿದಂತೆ 4 ರೀತಿಯ ಭಾಷೆಗಳನ್ನು ಕಾಣಬಹುದು. ನಮಗೆ ಎಲ್ಲದರ ಪರಿಚಯವೂ ಇದೆ. ಹಾಗೆಯೇ ಸಭಾಧ್ಯಕ್ಷರ ಭಾಷೆಯ ಬಗ್ಗೆಯೂ ನಕ್ಷೆ ಹಾಕಿಕೊಟ್ಟುಬಿಡಿ. ನೀವು ಮಾತನಾಡುವುದನ್ನು ನಾವು ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ. ಇಂಡಿಯನ್ ಇಂಗ್ಲಿಷ್, ಅಮೆರಿಕ ಇಂಗ್ಲಿಷ್ ಎಂಬ ಡಿಕ್ಷನರಿಗಳಿದ್ದಂತೆ, ಸ್ಪೀಕರ್ ಕನ್ನಡ ಎಂಬ ಡಿಕ್ಷನರಿಯೊಂದನ್ನು ಕೊಟ್ಟರೆ ಅನುಕೂಲವಾಗುತ್ತದೆ ಎಂದು ನಗೆಚಟಾಕಿ ಹಾರಿಸಿದರು.
Laxmi News 24×7