ಬೆಂಗಳೂರು : ನಿಗದಿತ ಸಮಯಕ್ಕೆ ಸರಿಯಾಗಿ ಸದನಕ್ಕೆ ಬರುವ ಸದಸ್ಯರಿಗೆ ಸೂಕ್ತ ಬಹುಮಾನ ನೀಡುವುದಾಗಿ ಸಭಾಧ್ಯಕ್ಷ ಯು.ಟಿ.
ಖಾದರ್ ವಿಧಾನಸಭೆಯಲ್ಲಿ ಇಂದು ಪ್ರಕಟಿಸಿದರು. ಪ್ರತಿದಿನ ಸಕಾಲಕ್ಕೆ ಬಂದವರ ಹೆಸರು ಪ್ರಕಟಿಸಿ ಬಹುಮಾನ ನೀಡಲಾಗುವುದು ಎಂದು ಅವರು ಹೇಳಿದರು.
ಈ ವೇಳೆ ಶಾಸಕರೊಬ್ಬರು, ಬಹುಮಾನ ನೀಡುತ್ತೇವೆ ಎನ್ನುವುದು ಬೇಡ, ಪ್ರಮಾಣಪತ್ರ ಕೊಡುತ್ತೇವೆ ಎಂದು ಹೇಳಿ ಎಂಬ ಸಲಹೆ ನೀಡಿದರು. ಅದಕ್ಕೆ ಸಭಾಧ್ಯಕ್ಷರು, ಸೂಕ್ತವಾದ ಅಭಿಪ್ರಾಯ ಎಂದು ಸಮ್ಮತಿಸಿದರು. ನಿನ್ನೆ ಸಮಯಕ್ಕೆ ಸರಿಯಾಗಿ ಬಂದ ಸದಸ್ಯರ ಹೆಸರನ್ನು ಇಂದು ಪ್ರಕಟಿಸಲಾಗುವುದು. ಇಂದು ನಿಗದಿತ ಸಮಯಕ್ಕೆ ಬಂದ ಸದಸ್ಯರ ಹೆಸರನ್ನು ನಾಳೆ ಪ್ರಕಟಿಸುವುದಾಗಿ ಎಂದು ತಿಳಿಸಿದರು.
ಸದಸ್ಯರಾದ ಐಹೊಳೆ ದುರ್ಯೋಧನ ಮಹಾಲಿಂಗಪ್ಪ, ದರ್ಶನ್ ಪುಟ್ಟಣ್ಣಯ್ಯ, ಸಿ.ಎನ್. ಬಾಲಕೃಷ್ಣ, ಕೌಜಲಗಿ ಮಹಾಂತೇಶ್ ಶಿವಾನಂದ್, ಅಶೋಕ್ ಕುಮಾರ್ ರೈ, ಗೋಪಾಲಕೃಷ್ಣ ಬೇಳೂರು, ಜನಾರ್ದನ ರೆಡ್ಡಿ, ನೇಮಿರಾಜ ನಾಯಕ್, ಎಂ.ಟಿ. ಕೃಷ್ಣಪ್ಪ, ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಹಲವು ಸದಸ್ಯರ ಹೆಸರನ್ನು ಉಲ್ಲೇಖಿಸಿ ನಿಗದಿತ ಸಮಯಕ್ಕೆ ಬಂದಿದ್ದಾರೆ ಎಂದರು.
ಆಗ ಸದಸ್ಯರಾದ ಅಪ್ಪಾಜಿ ಸಿ.ಎಸ್. ನಾಡಗೌಡ ಹಾಗೂ ಸುನೀಲ್‍ಕುಮಾರ್ ಅವರು, ನಿನ್ನೆ ನಾವು ಕೂಡ ಸರಿಯಾದ ಸಮಯಕ್ಕೆ ಬಂದಿದ್ದೆವು. ಆದರೂ ನೀವು ವಾಚಿಸಿದ ಹೆಸರುಗಳ ಪಟ್ಟಿಯಲ್ಲಿ ನಮ್ಮ ಹೆಸರಿಲ್ಲ ಎಂದು ಆಕ್ಷೇಪಿಸಿದರು. ಆಗ ಸಭಾಧ್ಯಕ್ಷರು ಪರಿಶೀಲಿಸುವುದಾಗಿ ಹೇಳಿದರು.