ನವದೆಹಲಿ: ಬಿಜೆಪಿ ಪಕ್ಷ ಸಂಘಟನೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.ಸಾಂಸ್ಥಿಕ ಪುನಶ್ಚೇತನಕ್ಕಾಗಿನಾಲ್ಕು ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರನ್ನು ಪಕ್ಷದ ರಾಷ್ಟ್ರೀಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.
ನಡ್ಡಾ ಮಂಗಳವಾರ ನೇಮಿಸಿ ಆದೇಶ ಹೊರಡಿಸಿದ್ದಾರೆ. ಇದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ ಬದಲಾವಣೆ ಊಹಾಪೋಹಗಳಿಗೆ ಮತ್ತಷ್ಟು ಪೃಷ್ಠಿ ನೀಡಿದೆ.
ಹಾಲಿ ಕೇಂದ್ರ ಸಚಿವರಾದ ಜಿ.ಕಿಶನ್ ರೆಡ್ಡಿ ಅವರನ್ನು ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದೇ ವೇಳೆ, ಹಿಂದುಳಿದ ವರ್ಗಗಳ ನಾಯಕರಾದ ಎಟೆಲಾ ರಾಜೇಂದರ್ ಅವರನ್ನು ತೆಲಂಗಾಣ ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ರಾಜೇಂದರ್ ತೆಲಂಗಾಣದ ಆಡಳಿತಾರೂಢ ಬಿಆರ್‌ಎಸ್ ತೊರೆದು ಬಿಜೆಪಿ ಸೇರಿದ್ದರು. ಹಾಲಿ ರಾಜ್ಯಾಧ್ಯಕ್ಷರಾದ ಬಂಡಿ ಸಂಜಯ್ ಕುಮಾರ್ ಅವರನ್ನು ಮುಂದಿನ ದಿನಗಳಲ್ಲಿ ಕೇಂದ್ರ ಸಚಿವ ಸಂಪುಟದ ಪುನರ್ ರಚನೆ ಸಂದರ್ಭದಲ್ಲಿ ಸಚಿವರಾಗಿ ನೇಮಕಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.