ರಾಯಚೂರು: ಜಿಲ್ಲೆಯ ಅಪ್ಪನದೊಡ್ಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಉಪ್ಪಿಟು ಸೇವಿಸಿ 70 ಮಕ್ಕಳು ಅಸ್ವಸ್ಥರಾದ ಘಟನೆ ನಡೆದಿದೆ. ಮಕ್ಕಳಿಗೆ ನೀಡಲು ತಯಾರಾದ ಬಿಸಿಯೂಟದ ಉಪ್ಪಿಟ್ಟಿಗೆ ಹಲ್ಲಿಯೊಂದು ಬಿದ್ದಿದ್ದು, ಮಕ್ಕಳು ಈ ಉಪ್ಪಿಟ್ಟನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ.
ಈ ಘಟನೆಗೆ ಅಡುಗೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.
ಇನ್ನು ಘಟನೆ ತಿಳಿದ ಅಧಿಕಾರಿಗಳು ಕೂಡಲೇ ಸ್ಥಳಕ್ಕಾಗಮಿಸಿದ್ದಾರೆ. ಅಸ್ವಸ್ಥಗೊಂಡ ಮಕ್ಕಳಿಗೆ ಶಾಲೆ ಬಳಿಯೇ ಆರೋಗ್ಯ ತಪಾಸಣೆ ಮಾಡಿಸಿ 30 ಮಕ್ಕಳನ್ನು ಯಪಲದಿನ್ನಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹಾಗೆ 20 ಮಕ್ಕಳನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಉಳಿದ ಮಕ್ಕಳಿಗೆ ಶಾಲೆ ಬಳಿಯೇ ಚಿಕಿತ್ಸೆ ನೀಡಲಾಗುತ್ತದೆ.
ಶಾಲೆಗೆ ದೌಡಾಯಿಸಿದ ಪೋಷಕರು: ಮಕ್ಕಳು ಅಸ್ವಸ್ಥಗೊಂಡ ವಿಚಾರ ತಿಳಿದ ಕೂಡಲೇನೂರಾರು ಪೋಷಕರು ಶಾಲೆ ಬಳಿ ಜಮಾಯಿಸಿದರು. ಹಾಗೆ ರಾಯಚೂರು ಡಿಎಚ್ ಒ ಡಾ.ಸುರೇಂದ್ರ ಬಾಬು ಆಗಮಿಸಿ ವಿಚಾರಿಸಿದರು. ಮಕ್ಕಳನ್ನು ತಪಾಸಣೆ ಮಾಡಿರುವ ವೈದ್ಯರು ಸದ್ಯ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಸದ್ಯ ಅಪ್ಪನದೊಡ್ಡಿ ಗ್ರಾಮದ ಬಳಿಯೇ ವೈದ್ಯರ ತಂಡ ಬೀಡುಬಿಟ್ಟಿದೆ.