ಬೆಂಗಳೂರು : ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಯುವತಿ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಈಗ ಈ ಪ್ರಕರಣ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಜೂನಿಯರ್ ವಿದ್ಯಾರ್ಥಿ ಮೇಲೆ ಮಾರಕಾಸ್ತ್ರ ಬೀಸಿದ್ದ 7 ಜನ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸಾಹಸ್ ಗೌಡ, ಜೀವನ್, ಅಭಿಷೇಕ್, ರವಿಕುಮಾರ್, ಚಂದನ್, ಗೌತಮ್ ಹಾಗೂ ಸೂರ್ಯ ಎಂದು ಗುರುತಿಸಲಾಗಿದೆ.
ಇದೇ ತಿಂಗಳ 5ರಂದು ನಾಗರಭಾವಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಸಂಭವಿಸಿತ್ತು. ದರ್ಶನ್ ಎಂಬ ವಿದ್ಯಾರ್ಥಿಯ ಮೇಲೆ ಆರೋಪಿಗಳು ಮಾರಕಾಸ್ತ್ರ ಬೀಸಿದ್ದರು. ಈ ಪ್ರಕರಣಕ್ಕೆ ಸಂಬಂಧಿದಂತೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.
ಯುವತಿಯ ವಿಚಾರಕ್ಕೆ ಆರಂಭವಾದ ಕಿರಿಕ್ : ನಾಗರಭಾವಿಯ ಖಾಸಗಿ ಕಾಲೇಜಿನಲ್ಲಿ ದರ್ಶನ್ ಮೊದಲ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಅದೇ ಕಾಲೇಜಿನಲ್ಲಿ ಸಾಹಸ್ ಗೌಡ, ಚಂದನ್, ಹಾಗೂ ಜೀವನ್ ವಿದ್ಯಾಭ್ಯಾಸ ಮಾಡುತ್ತಿದ್ದರು. ಕಾಲೇಜಿನಲ್ಲಿ ತಾವೇ ದೊಡ್ಡವರು ಎಂದು ಆರೋಪಿಗಳು ಬಿಲ್ಡಪ್ನಿಂದ ತಿರುಗುತ್ತಿದ್ದರು ಎಂಬ ಆರೋಪ ಅವರ ಮೇಲಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ಯುವತಿಯೊಬ್ಬಳ ವಿಚಾರವಾಗಿ ದರ್ಶನ್ ಸ್ನೇಹಿತರು ಮತ್ತು ಸಾಹಸ್ ಸ್ನೇಹಿತರು ಗಲಾಟೆ ಮಾಡಿಕೊಂಡಿದ್ದರು. ಆಗ ದರ್ಶನ್ ಮೇಲೆ ಸಾಹಸ್ ಹಲ್ಲೆಗೆ ಮುಂದಾದಾಗ ದರ್ಶನ್ ಅಲ್ಲಿಂದ ಎಸ್ಕೇಪ್ ಆಗಿದ್ದ. ನಂತರ ದರ್ಶನ್ ಅನ್ನು ಹೊಡೆಯುತ್ತೇನೆ ಎಂದು ಸಾಹಸ್ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.