ದಾವಣಗೆರೆ: ಮದ್ಯಪಾನ ವ್ಯಸನಿಯಾಗಿದ್ದ ಪತಿರಾಯನೊಬ್ಬ ತನ್ನ ಪತ್ನಿ ಲೈಂಗಿಕ ಕ್ರಿಯೆಗೆ ಸಹಕಾರ ಮಾಡಿಲ್ಲ ಎಂದು ಕುತ್ತಿಗೆ ಸೀಳಿ ಕೊಲೆ ಮಾಡಿದ್ದು, ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
19/02/20ರಂದು ದಾವಣಗೆರೆ ಜಿಲ್ಲೆಯ ಅಮರಾವತಿ ಗ್ರಾಮದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಈ ಘಟನೆ ನಡೆದಿತ್ತು. ಮರಿಯಪ್ಪ(54) ಶಿಕ್ಷೆಗೊಳಗಾದ ಆರೋಪಿ. ಸೌಭಾಗ್ಯಮ್ಮ ಕೊಲೆಯಾದ ಪತ್ನಿ. ಆರೋಪಿ ಮರಿಯಪ್ಪ ಕುಡಿದು ಬಂದು ಮನೆಯಲ್ಲಿ ಹೆಂಡತಿ ಸೌಭಾಗ್ಯಮ್ಮ ಜೊತೆ ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಮೊದಲಿಗೆ ಕ್ಯಾತೆ ತೆಗೆದು ಜಗಳ ಮಾಡಿದ್ದಾನೆ.
ಬಳಿಕ ಲೈಂಗಿಕ ಕ್ರಿಯೆಗೆ ಸಹಕಾರ ಮಾಡದೇ ಇದ್ದುದರಿಂದ ಕೋಪಗೊಂಡ ಮರಿಯಪ್ಪ ಅದೇ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿ ಸೌಭಾಗ್ಯಳ ಕುತ್ತಿಗೆಗೆ ಕೊಯ್ದು ಕೊಲೆಮಾಡಿದ್ದ ಎಂದು ಪೋಲಿಸ್ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದ ಸಂಬಂಧ ಅಂದು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಈ ಕೊಲೆ ಪ್ರಕರಣವನ್ನು ಅಂದಿನ ಹರಿಹರ ಸಿಪಿಐ ಸತೀಶ ಕುಮಾರ್ ಅವರು ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ದಾವಣಗೆರೆ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ವಿ ವಿಜಯನಂದರವರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ 11,000 ಸಾವಿರ ದಂಡ ವಿಧಿಸಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನು ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಸತೀಶ ವಾದ ಮಂಡಿಸಿದ್ದರು. ಪ್ರಕರಣದ ತನಿಖೆಯನ್ನು ನಡೆಸಿದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ ಐಪಿಎಸ್ ಅವರು ಪ್ರಶಂಸಿದ್ದಾರೆ.
ಸೈನಿಕನ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ: ಹುಬ್ಬಳ್ಳಿ ಜಿಲ್ಲೆಯ ಕಲಘಟಗಿ ತಾಲೂಕಿನ ಹೊನ್ನಳ್ಳಿ ಎಂಬಲ್ಲಿ ಸೈನಿಕನ ಹತ್ಯೆ ಪ್ರಕರಣದ ಏಳು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 34 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿತ್ತು. ಸೈನಿಕ ನಿಂಗಪ್ಪ ಯಲಿವಾಳ ಎಂಬುವವರನ್ನು 2015ರ ಸೆ.20ರಂದು ಬಸವರಾಜ ಯಲಿವಾಳ ಹಾಗೂ ಇತರ ಆರು ಜನರು ಕೊಲೆ ಮಾಡಿದ್ದರು.
Laxmi News 24×7